ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟ: 61,927 ಅಭ್ಯರ್ಥಿಗಳು ಉತ್ತೀರ್ಣ

ಆನ್‌ಲೈನ್‌ನಲ್ಲೇ ಅರ್ಹತಾ ಅಂಕಪಟ್ಟಿ ಲಭ್ಯ

Update: 2022-12-14 14:47 GMT

ಬೆಂಗಳೂರು, ಡಿ.14: ಇತ್ತೀಚಿಗೆ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 61,927 ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ. 

ನ.6ರಂದು ಪತ್ರಿಕೆ-1 (1ರಿಂದ 5ನೇ ತರಗತಿ ಬೋಧನೆ) ಹಾಗೂ ಪತ್ರಿಕೆ-2 (6ರಿಂದ 8ನೇ ತರಗತಿ ಬೋಧನೆ) ನಡೆಸಿದ್ದ ಪರೀಕ್ಷೆಯಲ್ಲಿ ಪತ್ರಿಕೆ-1ಕ್ಕೆ 1.40 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 20,070 ಮಂದಿ ಅರ್ಹರಾಗಿದ್ದಾರೆ. 

ಅದೇ ರೀತಿ, ಪತ್ರಿಕೆ-2ರಲ್ಲಿ 1,92,066 ಅಭ್ಯರ್ಥಿಗಳ ಪೈಕಿ 41,857 ಮಂದಿ ಅರ್ಹರಾಗಿದ್ದಾರೆ. ಒಟ್ಟಾರೆ 3,32,856 ಅಭ್ಯರ್ಥಿಗಳಲ್ಲಿ 61,927 ಮಂದಿ ಅರ್ಹತೆ ಹೊಂದಿದ್ದಾರೆ ಎಂದು ಶಿಕ್ಷಣ ಇಲಾಖೆ ಪ್ರಕಟಿಸಿದೆ, ಪತ್ರಿಕೆ-1ಕ್ಕೆ 75 ಮತ್ತು ಪತ್ರಿಕೆ-2ಕ್ಕೆ 1,257 ಸೇರಿ 1,332 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಪರಿಶೀಲಿಸಿ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಮರಾಠಿ, ಹಿಂದಿ ಮತ್ತು ಸಂಸ್ಕೃತ ಸೇರಿ ಒಟ್ಟು ಎಂಟು ಭಾಷೆ ಪರೀಕ್ಷೆಗಳು ಮತ್ತು 7 ಐಚ್ಛಿಕ ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು.

ಇದೇ ಮೊದಲ ಬಾರಿಗೆ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳಿಗೆ ಕ್ಯುಆರ್ ಕೋಡ್ ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿಯನ್ನು ವಿತರಿಸಲಾಗುತ್ತಿದೆ.

ಪ್ರಮಾಣಪತ್ರ ಪಡೆಯುವುದು ಹೇಗೆ? : ಅಭ್ಯರ್ಥಿಗಳು ಡಿ.26ರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ ಸೈಟ್ https://schooleducation.kar.nic.in ನಲ್ಲಿ ನೀಡಲಾದ ಲಿಂಕ್ ಮೂಲಕ ತಮ್ಮ ಅರ್ಹತಾ ಪ್ರಮಾಣ ಪತ್ರ/ಗಣಕೀಕೃತ ಅಂಕಪಟ್ಟಿ (ELIGIBILITY CERTIFICATE) ಯನ್ನು ಬೇಕಾದಷ್ಟು ಸಂಖ್ಯೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಪ್ರಮಾಣ ಪತ್ರವು ಸೀಮಿತ ದಿನಗಳಿಗೆ ಮಾತ್ರ ವೆಬ್‌ ಸೈಟ್ ನಲ್ಲಿ ಲಭ್ಯವಿರಲಿದ್ದು, ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಸಂರಕ್ಷಿಸಿಕೊಳ್ಳುವುದು. ಈ ಸಂಬಂಧ ಕೇಂದ್ರೀಕೃತ ದಾಖಲಾತಿ ಘಟಕವನ್ನು ಪದೇ ಪದೇ ಸಂಪರ್ಕಿಸುವ ಅಗತ್ಯವಿರುವುದಿಲ್ಲ.

Similar News