ಪಂಚರತ್ನ ರಥಯಾತ್ರೆ ಡಿ.15ರಿಂದ ಪುನರಾರಂಭ: ಕುಮಾರಸ್ವಾಮಿ

Update: 2022-12-14 14:51 GMT

ಬೆಂಗಳೂರು, ಡಿ. 14: ಮಳೆಯ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಪಂಚರತ್ನ ರಥಯಾತ್ರೆ ನಾಳೆ(ಡಿ.15)ಯಿಂದ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಪುನಾರಂಭ ಆಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿ.6ರಂದು ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ ರಥಯಾತ್ರೆ ನಡೆಸಿದ ನಂತರ ಡಿ. 11ರ ವರೆಗೆ ಮುಂದೂಡಲಾಗಿತ್ತು. ಈ ಮಧ್ಯೆ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ವ್ಯಾಪಕ ಮಳೆ ಸುರಿಯುತ್ತಿತ್ತು. ಈ ಕಾರಣಕ್ಕೆ ಯಾತ್ರೆ ಮುಂದೂಡಲಾಗಿತ್ತು’ ಎಂದು ಹೇಳಿದ್ದಾರೆ.

‘ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ನಾಳೆಯಿಂದ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ನಡೆಯಲಿದೆ. 15ಕ್ಕೆ ಮಾಗಡಿ, 16ಕ್ಕೆ ರಾಮನಗರ, 17ಕ್ಕೆ ಹಾರೋಹಳ್ಳಿ, 18ಕ್ಕೆ ಕನಕಪುರ, 19ಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಾಗಡಿಯ ಶ್ರೀರಂಗನಾಥ ಸ್ವಾಮಿ ದೇವಾಲಯ ಮತ್ತು ಸೋಮೇಶ್ವರ ದೇವಾಲಯದಲ್ಲಿ ಸಂಜೆ ಮಾಜಿ ಸಿಎಂ ಪೂಜೆ ಸಲ್ಲಿಸುವರು. ನಂತರ ಮಾಗಡಿ ಪಟ್ಟಣದ ಜೆಡಿಎಸ್ ಭವನದಲ್ಲಿ ಸಭೆ ನಡೆಯಲಿದೆ. ಅನಂತರ ಕಲ್ಯಾ ಗೇಟ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ಮಾಗಡಿಯ ಕೋಟೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ನಿಮಿತ್ತ ಡಿ.16ಕ್ಕೆ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರ ಕುಟುಂಬ ಹಾಗೂ ಕುಮಾರಸ್ವಾಮಿ ಕುಟುಂಬದ ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News