×
Ad

ಕೊಪ್ಪಳ ವಿಮಾನ ನಿಲ್ದಾಣಕ್ಕೆ ಶೀಘ್ರ ಅಡಿಗಲ್ಲು: ಮುಖ್ಯಮಂತ್ರಿ ಬೊಮ್ಮಾಯಿ

Update: 2022-12-15 19:44 IST

ಕೊಪ್ಪಳ, ಡಿ. 15: ಕೊಪ್ಪಳ ವಿಮಾನ ನಿಲಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ)ಮೂಲಕ 40 ಕೋಟಿ ರೂ.ಗಳನ್ನು ನೀಡಿದ್ದು, ಆದಷ್ಟು ಬೇಗನೇ ಭೂ ಸ್ವಾಧೀನ ಕಾರ್ಯವನ್ನು ಪೂರ್ಣಗೊಳಿಸಿ, ವಿಮಾನನಿಲ್ದಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಗೆ ಉತ್ತಮ ಭವಿಷ್ಯವಿದೆ. ಉಕ್ಕು  ತಯಾರು ಮಾಡುವ ಅವಕಾಶಗಳಿರುವ ಜಿಲ್ಲೆ. ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದ್ದು, ಅದಕ್ಕಾಗಿ  ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆ ಬಿಜೆಪಿ ಪ್ರಾರಂಭ ಮಾಡಿತು. ಈಗ ಪುನಃ ಅದನ್ನು ಪೂರ್ಣಗೊಳಿಸಿ ನೀರು ಕೊಡುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ. ಈ ಯೋಜನೆಗೆ ಆಲಮಟ್ಟಿಯಿಂದ ನೀರು ತರುವುದಿತ್ತು. ಕೊಪ್ಪಳ ಜಿಲ್ಲೆಗೆ ಕಡೇ ಹಂತದಲ್ಲಿ ನೀರು ಮುಟ್ಟುತ್ತಿರಲಿಲ್ಲ. 1. 8 ಟಿಎಂಸಿಗೆ ಹೆಚ್ಚು ಮಾಡಿ ನಾರಾಯಣಪುರಕ್ಕೆ ತಂದು ಮೊದಲು ಕೊಪ್ಪಳ ಜಿಲ್ಲೆಗೆ ಕೊಡಬೇಕೆಂದು ಮಾಡಿದ್ದು ಬಿಜೆಪಿ ಸರಕಾರ ಎಂದು ಅವರು ಹೇಳಿದರು.

ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ಅನುದಾನ ವಿನಿಯೋಗಿಸಿ 45 ಸಾವಿರ ಹೆಕ್ಟೆರ್‍ಗಿಂತ ಹೆಚ್ಚು ಪ್ರದೇಶದಲ್ಲಿ ನೀರಾವರಿಗೆ ಸೌಲಭ್ಯ ಕಲ್ಪಿಸಿದ್ದು ಯಡಿಯೂರಪ್ಪ ಸರಕಾರ. ಹನಿ ನೀರಾವರಿ ಯೋಜನೆಗೆ ಮಾರ್ಚ್ ತಿಂಗಳಲ್ಲಿ ಅಡಿಗಲ್ಲು ಹಾಕಿ ಈ ಭಾಗದ ಬಹುತೇಕ ಎಲ್ಲ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತುಂಗಭದ್ರಾ ಬ್ಯಾಲೆನ್ಸಿಂಗ್ ಜಲಾಶಯಕ್ಕೆ ಅಂತಿಮ ಒಪ್ಪಿಗೆ: ಯಡಿಯೂರಪ್ಪ ಸರಕಾರದಲ್ಲಿ ತುಂಗಭದ್ರಾ ಬ್ಯಾಲೆನ್ಸಿಂಗ್ ಜಲಾಶಯದ ಬಗ್ಗೆ ಡಿಪಿಆರ್ ಸಿದ್ಧಪಡಿಸಲು 20 ಕೋಟಿ ರೂ.ಗಳನ್ನು ಒದಗಿಸಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಜೊತೆ ಈ ಬಗ್ಗೆ ಮಾತನಾಡಿದ್ದು, ಅವರ ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಮತ್ತೊಂದು ಸುತ್ತಿನ ಮಾತುಕತೆಯನ್ನು ಜಲಸಂಪನ್ಮೂಲ ಸಚಿವರು ಮಾಡಿ ಅಂತಿಮ ಒಪ್ಪಿಗೆ ಪಡೆದು ಅಡಿಗಲ್ಲು ಹಾಕಿ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಹಾಗೂ 40 ಕೋಟಿ ರೂ.ಗಳನ್ನು ಕೆಕೆಆರ್‍ಡಿಬಿಗೆ ನೀಡಿ ಒಟ್ಟು 140 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. 

‘ನಮ್ಮ ಜನಕಲ್ಯಾಣ, ದೀನದಲಿತರ ಏಳಿಗೆಯ ಕಾರ್ಯಕ್ರಮಗಳ ಯಶಸ್ಸಿನ ಮೇಲೆ ಮತ ಪಡೆಯುತ್ತೇವೆ. ಈ ಬಾರಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಒಳಮೀಸಲಾತಿ ಬಗ್ಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದನ್ನು ‘ಸಿದ್ದರಾಮಯ್ಯ ಕಣ್ಣೊರೆಸುವ ತಂತ್ರ, ಕಾಂಗ್ರೆಸ್‍ಗೆ ಅಧಿಕಾರ ನೀಡಿದರೆ ಈ ಕೆಲಸವನ್ನು ಮಾಡುವುದಾಗಿ ಹೇಳಿದ್ದಾರೆ’. ಅವರು ಸಮಾವೇಶಕ್ಕೆ ಹೋಗಿ ಕೇವಲ ದೀಪ ಹಚ್ಚಿಬಂದರೇ ಹೊರತು ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಇದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಭಂಡತನದ ಬದ್ಧತೆ’

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ 

Similar News