ತರೀಕೆರೆ ಕ್ಷೇತ್ರ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿಗೆ ನಿರ್ಲಕ್ಷ್ಯ: ತಾಳಿಕಟ್ಟೆ ಲೋಕೇಶ್ ತಾಳಿಕಟ್ಟೆ ಆರೋಪ

Update: 2022-12-15 18:30 GMT

ಚಿಕ್ಕಮಗಳೂರು, ಡಿ.15: ಜಿಲ್ಲೆಯ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್.ಸುರೇಶ್ ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರು ಸ್ವಜನ ಪಕ್ಷಪಾತಿ ಧೋರಣೆಯಿಂದ ಕೆಲಸ ಮಾಡುತ್ತಿದ್ದು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ವಿರೋಧಿಯಾಗಿ ಅವರ ಅಭಿವೃದ್ಧಿಗೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ತರೀಕೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಎಸ್.ಸುರೇಶ್ ಶಾಸಕರಾಗಿ ಆಯ್ಕೆಯಾದ ನಂತರ ತಾಲೂಕು ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಎರಡೂವರೆ ವರ್ಷದಿಂದ ಅಜ್ಜಂಪುರ ತಾಲೂಕು ವ್ತಾಪ್ತಿಯಲ್ಲಿ ಅತಿವೃಷ್ಟಿ ಸಂಭವಿಸಿ ರೈತರು ಸಂಕಷ್ಟದಲ್ಲಿದ್ದು, ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿಲ್ಲ ಎಂದು ಆರೋಪಿಸಿದರು.

ತಾಲೂಕು ಕೇಂದ್ರದ ಸಮೀಪದಲ್ಲಿ ಭದ್ರಾ ಡ್ಯಾಂ ಇದ್ದರೂ ತರೀಕೆರೆ, ಅಜ್ಜಂಪುರ ತಾಲೂಕಿನ ಜನರು ಕುಡಿಯುವ ನೀರು ಹಾಗೂ ಕೃಷಿಗಾಗಿ ನೀರಾವರಿ ಯೋಜನೆಗಳಿಲ್ಲದೇ ಪರಿತಪಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಮರಚೀಕೆಯಾಗಿದೆ. ಜನರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಅಜ್ಜಂಪುರ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದರೂ ತಾಲೂಕು ಕಚೇರಿ ಹೊರತುಪಡಿಸಿ ಉಳಿದ ಸರಕಾರಿ ಇಲಾಖೆಗಳ ಕಚೇರಿಗಳನ್ನು ತೆರೆಯಲಾಗಿಲ್ಲ. ಅಜ್ಜಂಪುರ ತಾಲೂಕಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ದೂರಿದರು.

ಅಜ್ಜಂಪುರ, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನಾಲೆ ಹಾದುಹೋಗುತ್ತಿದ್ದು, ಜಮೀನು ಕಳೆದುಕೊಂಡ ಜನರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಶಾಸಕರು ತಮ್ಮ ಹಿಂಬಾಲಕರಿಗೆ ಮಣೆ ಹಾಕುತ್ತಿದ್ದು, ಸರಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಶಾಸಕರು ಹಾಗೂ ಅವರ ಕುಟುಂಬದವರ ಅನಮತಿ ಇಲ್ಲದೇ ಸಾರ್ವಜನಿಕರ ಕಡತಗಳ ವಿಲೇವಾರಿಯಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಈ ಎಲ್ಲಾ ಕಾರಣದಿಂದ ತಾಲೂಕಿನ ಜನರು ಬೇಸತ್ತು ಹೋಗಿದ್ದು, 2023ರ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ ಎಂದರು.

2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತರೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಲ್ಲಿ ತಾನೂ ಒಬ್ಬನಾಗಿದ್ದು, ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೇನೆ, ಪಕ್ಷ ಅವಕಾಶ ನೀಡಿದಲ್ಲಿ ಸ್ಪರ್ಧಿಸುತ್ತೇನೆ ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಾನು ರಾಜ್ಯಾದ್ಯಂತ ಹಲವಾರು ವಿದ್ಯಾಸಂಸ್ಥೆಗಳನ್ನು ಹೊಂದಿದ್ದೇನೆ. ತರೀಕೆರೆ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಗ್ರಾಮೀಣ ಜನರಿಗೆ ಶಿಕ್ಷಣದ ಕನಸನ್ನು ಸಾಕಾರ ಮಾಡುತ್ತಿದ್ದೇನೆ, ಪ್ರತೀ ಹಳ್ಳಿಯ ಓರ್ವ ವಿದ್ಯಾರ್ಥಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇನೆ. ಕೆಲಸ ಮಾಡುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತೊಂದರೆ, ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಹೋರಾಟ ಮಾಡಿದ್ದೇನೆ. ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸ್ಫರ್ಧಿಸುವ ಚಂತನೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ಇದೆ. ಪಕ್ಷ ಟಿಕೆಟ್ ನೀಡಿದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಒಂದು ವೇಳೆ ಟಿಕೆಟ್ ನೀಡದಿದ್ದಲ್ಲಿ ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತದೋ ಅವರ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Similar News