ಇದು ರಾಹುಲ್ ಗಾಂಧಿಯ ಮುತ್ತಾತನ ಕಾಲದ ಭಾರತ ಅಲ್ಲ, ಒಂದು ಇಂಚು ಜಾಗಕ್ಕೂ ಹೋರಾಡುವ ಭಾರತ: ಸಿ.ಟಿ.ರವಿ
ಚಿಕ್ಕಮಗಳೂರು, ಡಿ.17: ಇದು ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ, ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದದಿರುವ ಅವರ ಮುತ್ತಾತನ ಕಾಲದ ಭಾರತ ಇದಲ್ಲ, ಒಂದೊಂದು ಇಂಚು ಜಾಗಕ್ಕೂ ಸ್ವಾಭಿಮಾನದಿಂದ ಹೋರಾಡುವ ಭಾರತ ಇದು ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಕೇಂದ್ರ ಸರಕಾರ ನಿದ್ದೆಗೆ ಜಾರಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನ ಮಾನಸಿಕತೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ, ಕುಕ್ಕರ್ ಸ್ಫೋಟಗೊಂಡಿದ್ದು ಸತ್ಯ, ಆಟೊ ಚಾಲಕ ಕುಕ್ಕರ್ ಬಾಂಬ್ ತಯಾರಿಸಿ ಮುಖ್ಯಮಂತ್ರಿಗಳನ್ನ, ಅವರ ಸಭೆಯನ್ನು ಟಾರ್ಗೆಟ್ ಮಾಡಿದ್ದವನು ಈಗ ಆಸ್ಪತ್ರೆಯಲ್ಲಿದ್ದಾನೆ. ಬಾಂಬ್ ಇಲ್ಲದಿದ್ದರೆ ಸಾಮಾನ್ಯ ಕುಕ್ಕರ್ ಬ್ಲಾಸ್ಟ್ ಆಗಲು ಸಾದ್ಯವೇ?, ಇಂತಹ ಸಂದರ್ಭದಲ್ಲಿ ಆರೋಪಿಗಳ ಪರವಾಗಿರುವ ಮಾನಸಿಕತೆಯನ್ನು ಪ್ರದರ್ಶನ ಮಾಡಿದರೆ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾದ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಮತ ಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಓಲೈಸುವುದನ್ನು ಕಾಂಗ್ರೆಸ್ ಪಾಲಿಸುತ್ತಿದೆ. ರಾಹುಲ್ ಗಾಂಧಿ ಹೇಳಿದ್ದನ್ನೇ ಬಿಲಾವಲ್ ಬುಟ್ಟೋ ಹೇಳೋದು, ಅವರು ಹೇಳಿದ್ದನೇ ರಾಹುಲ್ ಗಾಂಧಿ ಹೋಳೋದು, ಇದು ಬಹು ದೊಡ್ಡ ಅಪಾಯಕಾರಿ ಸಂಗತಿಯಾಗಿದೆ. ಇವರಿಬ್ಬರ ನಡುವಿನ ಹೊಂದಾಣಿಕೆ ಏನೆಂದು ಗೊತ್ತಿಲ್ಲ. ಆದರೆ ಇಬ್ಬರೂ ಕೂಡಾ ವಂಶ ಪಾರಂಪರ್ಯದ ಕುಡಿಗಳು, ಇದೂ ಕೂಡಾ ವಂಶ ಪಾರಂಪರ್ಯದ ಕುಡಿ ಎಂದು ವ್ಯಂಗ್ಯ ಮಾಡಿದರು.