ಇಂದಿನಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭ; ಕುಂದಾನಗರಿಯಲ್ಲಿ ಕಾವೇರಲಿದೆ ಕಲಾಪ

Update: 2022-12-18 19:19 GMT

ಬೆಂಗಳೂರು, ಡಿ.18: ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವು ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ(ಡಿ.19)ದಿಂದ ಆರಂಭಗೊಳ್ಳುತ್ತಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದದ ಹಿನ್ನೆಲೆಯಲ್ಲಿ ಈ ಬಾರಿ ಕಲಾಪದಲ್ಲಿ ಕಾವೇರಿದ ಚರ್ಚೆಗಳು ನಡೆಯಲಿದೆ.

ಮಹಾದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಬ್ಬು ಬೆಳೆಗಾರರ ಬಾಕಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ, ವಿವಿಧ ಸಮುದಾಯಗಳ ಮೀಸಲಾತಿ ವಿಚಾರ, ಪಿಎಸ್ಸೈ ನೇಮಕಾತಿಯಲ್ಲಿನ ಅಕ್ರಮ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ, ಸರಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪ ಸೇರಿದಂತೆ ಹಲವಾರು ವಿಷಯಗಳು ಈ ಬಾರಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ಇದು ಚುನಾವಣಾ ವರ್ಷವಾಗಿರುವುದರಿಂದ ರಾಜ್ಯ ಸರಕಾರದ ಲೋಪಗಳನ್ನು ಎತ್ತಿ ತೋರಿಸಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ. ಅದೇ ರೀತಿ, ವಿರೋಧ ಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಆಡಳಿತ ಪಕ್ಷ ಬಿಜೆಪಿಯೂ ಸನ್ನದ್ದುಗೊಂಡಿದೆ.

ಒಂದೆಡೆ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂ.ಇ.ಎಸ್) ಮಹಾಮೇಳಾವ್ ಆಯೋಜಿಸಿದೆ. ಅಲ್ಲದೆ, ಶಿವಸೇನೆ, ಎನ್‍ಸಿಪಿಯ ಮುಖಂಡರನ್ನು ಈ ಮಹಾಮೇಳಾವ್ ನಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ. ಗಡಿ ವಿವಾದದ ಹಿನ್ನೆಲೆಯಲ್ಲಿ ಶಿವಸೇನೆಯ ಸಂಸದ ಧೈರ್ಯಶೀಲ ಮಾನೆಯನ್ನು ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಗಳಿಗೆ ಅವಕಾಶ ಕೋರಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿವೆ. ಪ್ರತಿಭಟನೆ ನಡೆಸುವ ಸಂಘಟನೆಗಳಿಗೆ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸ್ಥಳ ಹಾಗೂ ದಿನಾಂಕವನ್ನು ನಿಗದಿಗೊಳಿಸಲಾಗಿದೆ.

ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳು ಮೊದಲ ದಿನವೆ ಪ್ರತಿಭಟನೆಗೆ ಮುಂದಾಗಿವೆ. ಬಸ್ತವಾಡ ಬಳಿ 7 ಹಾಗೂ ಕೊಂಡಸಕೊಪ್ಪ  ಗ್ರಾಮದ ಬಳಿ ಮೂರು ಟೆಂಟ್‍ಗಳನ್ನು ಹಾಕಲಾಗಿದೆ. ಅಲ್ಲದೆ, ಪ್ರತಿಭಟನಾ ಸ್ಥಳದ ಬಳಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಟೆಂಟ್ ಸುತ್ತಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಇದಲ್ಲದೆ, ಡಿ.21ರಂದು ಮಾದಿಗ ದಂಡೋರ ಸಮಿತಿ, ಡಿ.22ರಂದು ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ಹಮ್ಮಿಕೊಂಡಿದೆ. ಪಂಚಮಸಾಲಿ ಸಮುದಾಯದ ಹೋರಾಟಕ್ಕೆ 100 ಎಕರೆ ಜಾಗವನ್ನು ನಿಗದಿಪಡಿಸಿರುವುದಾಗಿ ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಶತದಿನದತ್ತ ಅಧಿವೇಶನ: ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾದ ಬಳಿಕ ಇಲ್ಲಿ 10 ಅಧಿವೇಶನಗಳು ನಡೆದಿದ್ದು, 90 ದಿನಗಳ ಕಾಲ ಕಲಾಪ ನಡೆದಿದೆ. ಈ ಬಾರಿಯ ಅಧಿವೇಶನವು 10 ದಿನಗಳನ್ನು ಪೂರೈಸಿದರೆ 100 ದಿನಗಳ ಕಲಾಪ ನಡೆದಂತಾಗುತ್ತದೆ.

ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ?

ಸುವರ್ಣವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಲಾಗಿದ್ದು,  ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಅನಾವರಣಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ  ಸಾವರ್ಕರ್ ಭಾವಚಿತ್ರ ಅನಾವರಣಗೊಂಡರೆ ಅಧಿವೇಶನದ ಮೊದಲ ದಿನವೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಅಳವಡಿಸಿರುವಂತೆ ರಾಷ್ಟ್ರ ನಾಯಕರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸುವರ್ಣ ವಿಧಾನಸೌಧದಲ್ಲಿಯೂ ಅಳವಡಿಸಲಾಗಿದ್ದು, ಅವುಗಳ ಅನಾವರಣದ ಕಾರ್ಯಕ್ರಮಕ್ಕೆ ಬರುವಂತೆ ಸ್ಪೀಕರ್ ಕಚೇರಿಯಿಂದ ಆಹ್ವಾನ ಬಂದಿದೆ. ಆದರೆ, ಸಾವರ್ಕರ್ ಭಾವಚಿತ್ರದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲು ಅವಕಾಶವಿಲ್ಲ.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Similar News