ಜ.15ರ ನಂತರ ಜಿಲ್ಲಾವಾರು ಒಬಿಸಿ ಸಮಾವೇಶ: ಮಧು ಬಂಗಾರಪ್ಪ

Update: 2022-12-19 12:53 GMT

ಬೆಂಗಳೂರು, ಡಿ.19: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆಯ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ ಎಂದು ಕೆಪಿಸಿಸಿ ಒಬಿಸಿ ಘಟಕ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಣ್ಣ ಸಣ್ಣ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಜನವರಿ 15ರ ನಂತರ ಪ್ರತಿ ಜಿಲ್ಲೆಯಲ್ಲೂ ಒಬಿಸಿ ಸಮಾವೇಶ ಮಾಡಲಾಗುತ್ತದೆ. ಹೆಚ್ಚು ಜನಸಂಖ್ಯೆಯ ಕೆಲವು ಜಿಲ್ಲೆಗಳಲ್ಲಿ ಎರಡು, ಮೂರು ಸಮಾವೇಶಗಳು ಜರುಗುತ್ತವೆ. ಅಂತಿಮವಾಗಿ ಫೆಬ್ರವರಿ ಇಲ್ಲವೆ ಮಾರ್ಚ್ ತಿಂಗಳ ಆರಂಭದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಈ ಸಮಾವೇಶದಲ್ಲಿ ರಾಷ್ಟ್ರ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಾಗುವ ಮತದಾನದಲ್ಲಿ ಶೇ.50 ರಿಂದ 55 ರಷ್ಟು ಒಬಿಸಿ ಮತದಾರರಿದ್ದು, ಎಲ್ಲ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಧರ್ಮ-ಜಾತಿಯಾಧಾರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯದ್ದು, ಇದೀಗ ಜಾತಿ ಒಡೆಯುವ, ರೈತ ವಿರೋಧಿ ನೀತಿ, ಭ್ರಷ್ಟಾಚಾರ ಆಡಳಿತವಾಗಿದೆ. ಇದು ಮನುಷತ್ವದ ರಾಜಕಾರಣವಲ್ಲ ಎಂದರು.

ರಾಜ್ಯದ ವಿಷಮ ಪರಿಸ್ಥಿತಿಯ ದೃಷ್ಟಿಯಿಂದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಅಗತ್ಯವಿದೆ. ಭೂಮಿ ಹಕ್ಕು, ರೈತರಿಗೆ ಉಚಿತ ವಿದ್ಯುತ್ ನೀಡಿದ ಹೆಗ್ಗಳಿಕೆ ಕಾಂಗ್ರೆಸ್‍ಗೆ ಇದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಹಿಂದುಳಿದ ವರ್ಗಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಹಾದಿಯಲ್ಲೇ ನಡೆದು ರಾಜ್ಯದ ಹಿಂದುಳಿದ ವರ್ಗಗಳ ಎಲ್ಲ ಪದಾಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಂಡು ಸಮಾವೇಶಗಳನ್ನು ಯಶಸ್ವಿಗೊಳಿಸುವ ಕೆಲಸ ಮಾಡಲಾಗುವುದು. ಇದರಿಂದ ಚದುರಿ ಹೋಗಿರುವ ಒಬಿಸಿ ಸಮುದಾಯಗಳನ್ನು ಒಗ್ಗೂಡಿಸಿ, ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ರಾಮಲಿಂಗರೆಡ್ಡಿ ಸೇರಿದಂತೆ ಒಬಿಸಿ ನಾಯಕರು ಉಪಸ್ಥಿತರಿದ್ದರು.

'ಮುಂಬರುವ ವಿಧಾನಸಭೆ ಚುನಾವಣೆಗೆ, ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ತಯಾರು ಸಮಿತಿ ರಚಿಸಲಾಗಿದ್ದು, ನಾನು ಉಪಾಧ್ಯಕ್ಷನಾಗಿದ್ದಾನೆ. ಪ್ರಣಾಳಿಕೆ ನಿಟ್ಟಿನಲ್ಲಿ ಐದಾರು ಸಭೆಗಳು ಆಗಿವೆ. ಮುಖ್ಯ ಪ್ರಣಾಳಿಕೆ ಜತೆಗೆ ಪ್ರದೇಶವಾರು ಪ್ರಣಾಳಿಕೆ ರಚಿಸಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡಲಾಗುತ್ತಿದೆ'.

- ಮಧು ಬಂಗಾರಪ್ಪ, ಕೆಪಿಸಿಸಿ ಒಬಿಸಿ ಘಟಕ ರಾಜ್ಯಾಧ್ಯಕ್ಷ

Similar News