×
Ad

ಚಿಕ್ಕಮಗಳೂರು | ಹಾಸ್ಟೆಲ್‍ನಲ್ಲಿ ಬಾಲಕಿಗೆ ಗರ್ಭಪಾತ; ಆರೋಪ

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

Update: 2022-12-19 20:31 IST

ಚಿಕ್ಕಮಗಳೂರು, ಡಿ.19: ನಗರದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯೊಬ್ಬಳಿಗೆ ಇತ್ತೀಚೆಗೆ ಹಾಸ್ಟೆಲ್‍ನಲ್ಲೇ ಗರ್ಭಪಾತ ಆಗಿರುವ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಬೇಜವಾಬ್ದಾರಿ ಇದಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದಸಂಸ ಮುಖಂಡರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ದಸಂಸ ಮುಖಂಡರಾದ ಕಬ್ಬಿಗೆರೆ ಮೋಹನ್, ಕೂದುವಳ್ಳಿ ಯಶೋಧರ್, ಭವ್ಯಾ, ರೇಣುಕಾ ಮತ್ತಿತರರು ಈ ಸಂಬಂಧ ಅಪರ ಜಿಲ್ಲಾಧಿಕಾರಿ ರೂಪಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಹಾಸ್ಟೆಲ್‍ನಲ್ಲಿ ವ್ಯಾಸಂಗಕ್ಕೆ ಬರುವ ತಳ ಸಮುದಾಯದ ವಿದ್ಯಾರ್ಥಿನಿಯರ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ಕಾಳಜಿ ವಹಿಸದೇ ನಿರ್ಲಕ್ಷ್ಯವಹಿಸುತ್ತಿರುವ ಪರಿಣಾಮ ವಿದ್ಯಾರ್ಥಿನಿಯರು ಕಿಡಿಗೇಡಿಗಳಿಂದ ಕಿರುಕುಳ ಅನುಭವಿಸುವಂತಾಗಿದೆ. ನಗರದ ಬೇಲೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಾಲಿಕಯರ ಹಾಸ್ಟೆಲ್‍ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ನ.8ರಂದು ಗರ್ಭಪಾತ ಆಗಿದೆ ಎಂಬ ಅಘಾತಕಾರಿ ಆರೋಪ ಕೇಳಿ ಬರುತ್ತಿದ್ದು, ಈ ಸಂಬಂಧ ಇಲಾಖೆ ಅಧಿಕಾರಿಗಳು ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದ ಈ ಪ್ರಕರಣ ನಿಜ ಎಂಬುದು ಸ್ಪಷ್ಟವಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿ ಚೈತ್ರಾ ಅವರ ಬೇಜವಬ್ದಾರಿಯೇ ಈ ಘಟನೆಗೆ ಕಾರಣವಾಗಿದೆ ಎಂದು ದೂರಿದರು.

'ಈ ಘಟನೆ ಸಂಬಂಧ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು. ಇಲಾಖೆಯ ಹಿರಿಯ ಅಧಿಕಾರಿ ಚೈತ್ರಾ ಅವರ ನಿರ್ಲಕ್ಷ್ಯ, ಬೇಜವಬ್ದಾರಿಯೇ ಘಟನೆ ಕಾರಣವಾಗಿದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿರುವ ಅಧಿಕಾರಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು' ಎಂದು ಆಗ್ರಹಸಿದ್ದಾರೆ. 

► ಸಮಾಜ ಕಲ್ಯಾಣ ಇಲಾಖೆ ಸ್ಷಷ್ಟೀಕರಣ:

ವಿದ್ಯಾರ್ಥಿನಿಗೆ ಗರ್ಭಪಾತ ಆಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿರುವ ಸಂಬಂಧ ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದು, ಇಲಾಖಾಧಿಕಾರಿಗಳು ಈ ಘಟನೆಯನ್ನು ಮುಚ್ಚಿ ಹಾಕಲು ಹುನ್ನಾರ ಮಾಡಿಲ್ಲ, ಘಟನೆ ಬಗ್ಗೆ ಕ್ರಮವಹಿಸಿ ಪೊಲೀಸರಿಗೆ ದೂರನ್ನೂ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು,   ನ.8ರಂದು ವಿದ್ಯಾರ್ಥಿನಿ ಋತುಸ್ರಾವ ಹಾಗೂ ಹೊಟ್ಟೆ ನೋವಿನ ಕಾರಣ ನೀಡಿ ಕಾಲೇಜಿಗೆ ಹೋಗದೇ ನಿಲಯದಲ್ಲಿಯೇ ಉಳಿದುಕೊಂಡಿದ್ದು, ಮಧ್ಯಾಹ್ನ 12ರ ವೇಳೆಗೆ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಉಲ್ಬಣಗೊಂಡಿತ್ತು. ವಿದ್ಯಾರ್ಥಿನಿ ಆಯಾಸಗೊಂಡಿದ್ದು, ಇದನ್ನು ಆಕೆಯ ಸಹಪಾಠಿಗಳು, ಅಡುಗೆಯವರಿಗೆ ಮತ್ತು ನಿಲಯ ಪಾಲಕರಿಗೆ ತಿಳಿಸಿದ್ದಾಳೆ. ನಿಲಯ ಪಾಲಕರು ಹಾಗೂ ಅಡುಗೆಯವರು ವಿಚಾರಿಸಿದಾಗ ವಿದ್ಯಾರ್ಥಿನಿಗೆ ಗರ್ಭಪಾತವಾಗಿರುವುದು ತಿಳಿದು ಬಂದಿದೆ. ಕೂಡಲೇ ವಿದ್ಯಾರ್ಥಿಯನ್ನು ಹೆರಿಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗರ್ಭಪಾತದ ವಿಷಯವನ್ನು ಆಕೆಯ ಪೋಷಕರು ಹಾಗೂ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ವೈದ್ಯರು ಗರ್ಭಪಾತ ಆಗಿರುವುದನ್ನು ಖಚಿತ ಪಡಿಸಿದ್ದರಿಂದ ಭ್ರೂಣವನ್ನು ಎಫ್‍ಎಸ್‍ಎಲ್ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಚಿಕಿತ್ಸೆ ಬಳಿಕ ನ.10ರಂದು ವಿದ್ಯಾರ್ಥಿನಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಘಟನೆ ಸಂಬಂಧ ಮಹಿಳಾ ಠಾಣೆಯ ಪೊಲೀಸರು ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಅಲ್ಲಿನ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಪರಿಚಯವಿದ್ದ ಯುವಕ ಈ ಕೃತ್ಯ ಎಸಗಿದ್ದು, ಕಾಲೇಜಿಗೆ ರಜೆ ಇದ್ದ ಸಂದರ್ಭ ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಪರ್ಕ ಬೆಳೆಸಿದ್ದು, ಪರಿಣಾಮ ವಿದ್ಯಾರ್ಥಿನಿಗೆ ಗರ್ಭಧರಿಸಿದ್ದಾಳೆ. ಸದ್ಯ ವಿದ್ಯಾರ್ಥಿನಿಯ ಪೋಷಕರು ಆಕೆಯನ್ನು ಮನೆಯಲ್ಲಿ ಇರಿಸಿಕೊಂಡು ಮನೆಯಿಂದಲೇ ಕಾಲೇಜಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿನಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿದೆ. ಘಟನೆ ಸಂಬಂಧ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕುವಂತಹ ಯಾವುದೇ ಕಾನೂನು ವಿರೋಧಿ ನಡವಳಿಯನ್ನು ತೋರಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Similar News