ಶೃಂಗೇರಿ | ರಸ್ತೆ, ಸೇತುವೆ ದುರಸ್ತಿಗೆ ನಿರ್ಲಕ್ಷ್ಯ: ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಗ್ರಾಮಸ್ಥರಿಂದ ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ಕರೆ

Update: 2022-12-19 16:03 GMT

ಚಿಕ್ಕಮಗಳೂರು, ಡಿ.19: ತಮ್ಮ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳ ವಿರುದ್ಧ ಬೇಸತ್ತ ಹಾಡುಗಾರು  ಗ್ರಾಮದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಸ್ಥಳೀಯ ಮುಖಂಡರು ಹಾಗೂ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ನೀಡಿರುವುದಲ್ಲದೇ ಮುಂಬರಲಿರುವ ವಿಧಾನಸಭೆ ಚುನಾವಣೆ ಬಹಿಷ್ಕರಿಸಿ ಧರಣಿ ನಡೆಸಿರುವ ಘಟನೆ ಕಾಫಿನಾಡಿನಲ್ಲಿ ವರದಿಯಾಗಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಹಾಡುಗಾರು ಗ್ರಾಮದ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಮುಖಂಡರು ತಮ್ಮ ಗ್ರಾಮದ ಮುಖ್ಯ ರಸ್ತೆಯಲ್ಲಿ ಅತಿವೃಷ್ಟಿಯಿಂದ ಹದಗೆಟ್ಟಿದ್ದ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಶೃಂಗೇರಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಆಡಳಿತ ಪಕ್ಷ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸದ ಈ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭ ತಮ್ಮ ಗ್ರಾಮದಲ್ಲಿ ಸಭೆ, ಸಮಾರಂಭಗಳನ್ನೂ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಚುನಾವಣೆಯನ್ನೂ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸೇತುವೆ ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಗೆ ಸಿಲುಕಿ ಕುಸಿಯುವ ಹಂತದಲ್ಲಿದೆ. ಈ ಸೇತುವೆ ದುರಸ್ತಿಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸೇತುವೆ,ರಸ್ತೆ ಹಳಾಗಿರುವುದರಿಂದ ಗ್ರಾಮದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಗ್ರಾಮಸ್ಥರಿಗೆ ಮುಖ ತೋರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರ ಕೆಂಗೆಣ್ಣಿಗೆ ತುತ್ತಾಗಿದ್ದೇವೆ. ಈ ಕಾರಣದಿಂದ ನಮ್ಮ ಪಕ್ಷಗಳ ಮುಖಂಡರ ನಡವಳಿಕೆಗೆ ಬೇಸತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ನಾವು ಹೊಂದಿದ್ದ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯನ್ನೂ ಬಹಿಷ್ಕರಿಸುತ್ತಿದ್ದೇವೆ ಎಂದು ಈ ವೇಳೆ ಮುಖಂಡರು ತಿಳಿಸಿದ್ದಾರೆ.

ರಸ್ತೆ ಹಾಗೂ ಸೇತುವೆ ದುರಸ್ತಿಗಾಗಿ ಈ ಹಿಂದೆ ಸಂಬಂಧಿಸಿದವರಿಗೆ ಮನವಿ ನೀಡಿದ್ದಲ್ಲದೇ ಕ್ರಮವಹಿಸದಿದ್ದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇವೆಂದು ತಿಳಿಸಿದ್ದೆವು. ಆದರೂ ಮುಖಂಡರು ನಮ್ಮ ಮನವಿಗೆ ಸ್ಪಂದಿಸಿಲ್ಲ. ಎಚ್ಚರಿಕೆಗೂ ಸ್ಪಂದಿಸದ ಮುಖಂಡರಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಕಾಂಗ್ರೆಸ್, ಬಿಜೆಪಿಯಲ್ಲಿರುವ ಗ್ರಾಮದ ಹಲವಾರು ಮುಖಂಡರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದು ಇದೇ ವೇಳೆ ಅವರು ತಿಳಿಸಿದರು.

ಧರಣಿಯಲ್ಲಿ ಗ್ರಾಮದ ಮುಖಂಡರಾದ ಮಹೇಶ್, ಅಶ್ವಿತ್, ಸುಜಾತಾ, ದೇವರಾಜ್, ಸುನಿತಾ, ರಾಜೇಶ್, ಸುರೇಶ್, ಲಕ್ಷ್ಮಮ್ಮ, ಸುಮಿತ್ರಾ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Similar News