×
Ad

ಜಗ ದಗಲ

Update: 2022-12-20 13:52 IST

ವರ್ಷದ ಪದ  'woman'

Dictionary.com ಪ್ರಕಾರ, ಈ ವರ್ಷ ‘woman’ ಎಂಬ ಪದದ ಹುಡುಕಾಟ ಶೇ.1,400ಕ್ಕಿಂತ ಹೆಚ್ಚಾಗಿದೆ. ಸಾಮಾನ್ಯವಾಗಿ ಬಳಕೆಯಾಗುವ ಪದವೊಂದರ ವಿಚಾರದಲ್ಲಿ ಇದು ದೊಡ್ಡ ಪ್ರಮಾಣದ ಹುಡುಕಾಟವಾಗಿದೆ. ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೊದಲ ಕಪ್ಪು ಮಹಿಳೆ ನ್ಯಾ.ಕೇತಾಂಜಿ ಬ್ರೌನ್ ಜಾಕ್ಸನ್ ನೇಮಕಗೊಂಡಿದ್ದರಿಂದ ಹಿಡಿದು, ವಿಶ್ವದಲ್ಲೇ ಅತಿ ದೀರ್ಘಾವಧಿ ರಾಣಿ ಪಟ್ಟದಲ್ಲಿದ್ದ 2ನೇ ಎಲಿಜಬೆತ್ ಸಾವಿನವರೆಗೆ ಈ ಪದದ ಹುಡುಕಾಟ ವರ್ಷದುದ್ದಕ್ಕೂ ಮತ್ತೆ ಮತ್ತೆ ನಡೆದಿದ್ದು, ‘woman’ 2022ರ ವರ್ಷದ ಪದವೆಂದು Dictionary.com ಘೋಷಿಸಲು ಕಾರಣವಾಗಿದೆ.

ನಮ್ಮ 2022ರ ವರ್ಷದ ಪದವಾಗಿ ‘woman’ ಆಯ್ಕೆಯು ಪ್ರಸಕ್ತ ಸಾಂಸ್ಕೃತಿಕ ಸಂವಾದದಲ್ಲಿ ಲಿಂಗ, ಗುರುತು ಮತ್ತು ಭಾಷೆಯ ಒಳಗೊಳ್ಳುವಿಕೆ ಹೇಗೆ ಪ್ರಾಬಲ್ಯ ಹೊಂದಿದೆ ಎಂಬುದನ್ನು ಬಿಂಬಿಸುತ್ತದೆ ಎಂದು Dictionary.com ತನ್ನ ವರದಿಯಲ್ಲಿ ಬರೆದಿದೆ.

ಪದವೊಂದರ ವಿಶಿಷ್ಟ ವಾರ್ಷಿಕ ಹುಡುಕಾಟದ ದುಪ್ಪಟ್ಟು ಪ್ರಮಾಣ ‘woman’ ಪದದ ವಿಚಾರದಲ್ಲಿ ದಾಖಲಾಗಿದೆ. ಅಮೆರಿಕೆಯ ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್ ಆಯ್ಕೆಯ ನಂತರ ಮಾರ್ಚ್ ಅಂತ್ಯದಲ್ಲಿ ಈ ಪದದ ಹುಡುಕಾಟ ಏರಿತು. ಹುಡುಕಾಟ ‘woman’ ಪದಕ್ಕೆ ಮಾತ್ರ ಸೀಮಿತವಾಗಿರದೆ, ಅದರ ವ್ಯಾಖ್ಯಾನವನ್ನೂ ಒಳಗೊಂಡಿತ್ತು.

2022ರಲ್ಲಿ ಅತಿ ಹೆಚ್ಚು ಹುಡುಕಾಟಗಳನ್ನು ಹೊಂದಿರುವ ಪ್ರಮುಖ ಮಹಿಳೆಯರು: 1. ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್; 2. ಇರಾನ್‌ನ 22 ವರ್ಷದ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರು. ಇದು ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಯಿತು; 3. ನ್ಯಾಯಾಧೀಶೆ ಕೇತಾಂಜಿ ಬ್ರೌನ್ ಜಾಕ್ಸನ್. ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಮೊದಲ ಕಪ್ಪುಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು; 4. ಟೆನಿಸ್ ಸೂಪರ್‌ಸ್ಟಾರ್ ಸೆರೆನಾ ವಿಲಿಯಮ್ಸ್. ಅವರು ಟೆನಿಸ್‌ನಿಂದ ದೂರವಾಗುವುದಾಗಿ ಘೋಷಿಸಿದರು; 5. WNBA ತಾರೆ ಬ್ರಿಟ್ನಿ ಗ್ರೈನರ್. ರಶ್ಯದಿಂದ ಸೆರೆವಾಸ ಶಿಕ್ಷೆಯಾದದ್ದು ಅಂತರ್‌ರಾಷ್ಟ್ರೀಯ ಖಂಡನೆಗೆ ಒಳಗಾಯಿತು. ನಂತರ ಬಿಡುಗಡೆಗೊಂಡರು.

ರಾಯಭಾರತ್ವ ಬಿಟ್ಟ ಜೋಲಿ 

ಆಸ್ಕರ್ ಪ್ರಶಸ್ತಿ ವಿಜೇತ ನಟಿ ಏಂಜಲೀನಾ ಜೋಲಿ 20 ವರ್ಷಗಳ ಬಳಿಕ ವಿಶ್ವಸಂಸ್ಥೆ ನಿರಾಶ್ರಿತರ ಏಜನ್ಸಿಯ ರಾಯಭಾರಿ ಹುದ್ದೆ ತ್ಯಜಿಸಿದ್ದಾರೆ.

ವಿಶ್ವಸಂಸ್ಥೆ ಮಾಡುವ ಅನೇಕ ಕೆಲಸಗಳಲ್ಲಿ ನನಗೆ ನಂಬಿಕೆಯಿದೆ. ವಿಶೇಷವಾಗಿ ತುರ್ತು ಪರಿಹಾರದ ಮೂಲಕ ಅದು ಜೀವ ಉಳಿಸುತ್ತದೆ. ಸಂಘರ್ಷದಿಂದ ನೇರ ಪ್ರಭಾವಿತವಾಗಿರುವವರ ನೇತೃತ್ವದ ಸಂಸ್ಥೆಗಳೊಂದಿಗೆ ನಾನು ಈಗ ಕೆಲಸ ಮಾಡುತ್ತೇನೆ. ಅದು ಅವರಿಗೆ ಹೆಚ್ಚಿನ ಧ್ವನಿಯನ್ನು ನೀಡುತ್ತದೆ ಎಂದು 47 ವರ್ಷದ ಜೋಲಿ ತನ್ನ ಈ ನಿರ್ಧಾರ ಪ್ರಕಟಿಸುವ ವೇಳೆ ಹೇಳಿದ್ದಾರೆ.

ತನ್ನ Instagram ಪೋಸ್ಟ್ ನಲ್ಲಿ, ನಿರಾಶ್ರಿತರು ನಾನು ಪ್ರಪಂಚದಲ್ಲಿ ಹೆಚ್ಚು ಮೆಚ್ಚುವ ವ್ಯಕ್ತಿಗಳು ಮತ್ತು ನನ್ನ ಜೀವನದುದ್ದಕ್ಕೂ ಅವರೊಂದಿಗೆ ಕೆಲಸ ಮಾಡಲು ನಾನು ಸಮರ್ಪಿತಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆದರೆ ತಾನು ಕೆಲಸ ಮಾಡಲು ಯೋಜಿಸುತ್ತಿರುವ ಸಂಸ್ಥೆಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

ವಿಶ್ವಸಂಸ್ಥೆ ನಿರಾಶ್ರಿತರ ಏಜನ್ಸಿಯ ಹೇಳಿಕೆಯಲ್ಲಿ, ಏಂಜಲೀನಾ ಜೋಲಿ ವಿಸ್ತೃತವಾದ ಮಾನವೀಯ ಮತ್ತು ಮಾನವ ಹಕ್ಕುಗಳ ವಿಷಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ. ಜೋಲಿ ದಣಿವರಿಯದೆ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕ್ಷೇತ್ರ ಕಾರ್ಯಾಚರಣೆಗಳನ್ನು ನಡೆಸಿ ದುಃಖದ ಕಥೆಗಳು ಮತ್ತು ಭರವಸೆಯ ಕಥೆಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಜೋಲಿ 2001ರಿಂದ ವಿಶ್ವಸಂಸ್ಥೆ ನಿರಾಶ್ರಿತರ ಏಜನ್ಸಿಯೊಂದಿಗೆ ಕೆಲಸ ಶುರು ಮಾಡಿದರು. 2012ರಲ್ಲಿ ಅದರ ವಿಶೇಷ ಪ್ರತಿನಿಧಿಯಾದರು. ಇತ್ತೀಚಿನ ತಿಂಗಳುಗಳಲ್ಲಿ ಅವರು ಯುದ್ಧ ಸಂತ್ರಸ್ತ ಉಕ್ರೇನ್, ಯೆಮನ್ ಮತ್ತು ಬುರ್ಕಿನಾ ಫಾಸೊದಲ್ಲಿ ಸ್ಥಳಾಂತರಗೊಂಡ ಜನರನ್ನು ಭೇಟಿಯಾಗಿದ್ದರು.

ಅಪಾಯದಲ್ಲಿ ಅಮೆಝಾನ್ ಬಂಡೆನೆಲೆ 

ಅಮೆಝಾನ್ ನದಿಯೊಳಗಿನ ವಿಶಿಷ್ಟವಾದ ಬಂಡೆನೆಲೆಯು ತೈಲಕ್ಕಾಗಿ ಕೊರೆಯುವ ಯೋಜನೆಗಳಿಂದ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 2016ರಲ್ಲಿ ಕಂಡುಹಿಡಿಯಲಾದ ಇವು, ಔಷಧೀಯ ಅಥವಾ ವೈಜ್ಞಾನಿಕ ಮೌಲ್ಯದ ಅನೇಕ ಅಜ್ಞಾತ ಜೀವಿಗಳನ್ನು ಹೊಂದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಮೆಝಾಜಾನ್ ಬಂಡೆ ಅಸಾಮಾನ್ಯವಾಗಿದೆ. ಏಕೆಂದರೆ ಇದು ಆಳವಾದ ನೀರಿನಲ್ಲಿದೆ ಮತ್ತು ಕೆಲವೊಮ್ಮೆ ಪ್ರಪಂಚದ ಅತಿದೊಡ್ಡ ನದಿಯಿಂದ ಸಮುದ್ರಕ್ಕೆ ಹರಿಯುವ ಮಣ್ಣುಮಿಶ್ರಿತ ನೀರಿನ ಮರೆಯಲ್ಲಿರುತ್ತದೆ. ಬಂಡೆನೆಲೆ ಬಹಳ ವಿಶಾಲವಾದ ಪ್ರದೇಶವಾಗಿದೆ ಮಾತ್ರವಲ್ಲ, ಇನ್ನೂ ತಿಳಿದಿಲ್ಲದ ವಿಷಯಗಳು ಇಲ್ಲಿವೆ ಎಂದು ಜೈವಿಕ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಪರಿಣತರು ಹೇಳುತ್ತಾರೆ.

ಆ ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಳ್ಳುವ ಜೀವಿಗಳು ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲ ಎನ್ನಲಾಗುತ್ತಿದ್ದು, ಒಂದು ಸ್ಪಂಜನ್ನು ಪ್ರಸ್ತುತ ಸಾವೊ ಪಾಲೊ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಇದು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಸುಳಿವುಗಳು ಸಿಕ್ಕಿವೆ.

ಇವುಗಳ ಅಧ್ಯಯನ ಮತ್ತು ರಕ್ಷಣೆ ಆರ್ಥಿಕವಾಗಿ ಮಹತ್ವದ್ದಾಗಲಿದೆ ಎಂಬುದು ಸಂಶೋಧಕರ ನಿರೀಕ್ಷೆ. ಆದರೆ, ಬಂಡೆಯ ಹತ್ತಿರ ತೈಲವನ್ನು ಕೊರೆಯುವ ಯೋಜನೆಗಳು ತೈಲ ಸೋರಿಕೆಯನ್ನು ಉಂಟುಮಾಡಬಹುದಾದ್ದರಿಂದ ಅದು ಪರಿಸರ ವ್ಯವಸ್ಥೆಯನ್ನು ಧ್ವಂಸಗೊಳಿಸಬಹುದು ಎಂದು ವಿಜ್ಞಾನಿಗಳು ಕಳವಳಕ್ಕೊಳಗಾಗಿದ್ದಾರೆ.