'ಬೀಗರಾಗಿದ್ದರೂ ಯೋಜನೆ ಅನುಷ್ಟಾನ ಆಗುತ್ತಿಲ್ಲ': ಸದನದಲ್ಲಿ ಕೆಲ ಸಮಯ ಸ್ವಾರಸ್ಯಕರ ಚರ್ಚೆ

Update: 2022-12-20 10:00 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 20: ‘ಇಬ್ಬರು ಸಚಿವರ, ಬೀಗರ ಊರುಗಳು ನಮ್ಮ ಕ್ಷೇತ್ರದಲ್ಲಿದ್ದರೂ ಗಲಗಲಿ-ಮರೆಗುದ್ದಿ ನೀರಾವರಿ ಯೋಜನೆ ಅನುಷ್ಟಾನಗೊಳಿಸಿಲ್ಲ’ ಎಂಬುದು ಕೆಲ ಸಮಯ ಸ್ವಾರಸ್ಯಕರ ಚರ್ಚೆ ಗ್ರಾಸವಾಯಿತು.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಆನಂದ್ ಸಿದ್ದು ನ್ಯಾಮಗೌಡ, ಮುಧೋಳ ಭಾಗಕ್ಕೆ ನೀರಾವರಿ ಯೋಜನೆ ಪೂರ್ಣಗೊಳಿಸಬೇಕೆಂದು ತಮ್ಮದೆ ದಾಟಿಯಲ್ಲಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, 2018-19ರ ಸಾಲಿನಲ್ಲಿ ಹಣ ಮೀಸಲಿಟ್ಟಿಲ್ಲ. ಆದ್ಯತೆ ಮೇಲೆ ಮಾಡಬೇಕು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮರೆಗುದ್ದಿ ಯೋಜನೆ ಜಾರಿಗೊಳಿಸಬೇಕೆಂದು ಪ್ರತಿ ದಿನ ನನ್ನ ಬೆನ್ನತ್ತಿದ್ದಾರೆ. ಏಕೆಂದ್ದರೆ ಸೊಸೆ ಮರೆಗುದ್ದಿಯವರು. ಅದಕ್ಕಾಗಿ ಬೀಗರೂರಿಗೆ ಮಾಡಿಕೊಡಲು ನನ್ನ ಜೀವ ತಿನ್ನುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆನಂದ್ ಸಿದ್ದು ನ್ಯಾಮಗೌಡ, ‘ನಮ್ಮ ದುರ್ದೈವ ಏನೆಂದರೆ ಸಚಿವರಾದ ಸಿ.ಸಿ.ಪಾಟೀಲ್ ನಮ್ಮ ಕ್ಷೇತ್ರದ ಬೀಗರು, ಮುರುಗೇಶ್ ನಿರಾಣಿ ಅವರು ಬೀಗರಾಗಿದ್ದರೂ ಮರೆಗುದ್ದಿ ಯೋಜನೆ ಅನುಷ್ಠಾನ ಆಗುತ್ತಿಲ್ಲ’ಎಂದು ಚಟಾಕಿ ಹಾರಿಸಿದರು.

ಈ ವೇಳೆ ಎದ್ದುನಿಂತ ಕಾಂಗ್ರೆಸ್ ಸದಸ್ಯೆ ಲಕ್ಷ್ಮೀ ಹೆಬ್ಬಾಳ್ಕರ್, ‘ಆನಂದ್ ನೀವು ಮರೆಗುದ್ದಿಯಲ್ಲೇ ಬೀಗತನ ಮಾಡಿಕೊಳ್ಳಿ’ ಎಂದು ಮಸಾಲೆ ಬೆರೆಸಿದ್ದು ಸದನದಲ್ಲಿ ನಗೆ ಅಲೆಯನ್ನು ಉಕ್ಕಿಸಿತು.

ಬಳಿಕ ಉತ್ತರ ನೀಡಿದ ಸಚಿವ ಕಾರಜೋಳ, ಗಲಗಲಿ-ಮರೆಗುದ್ದಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Similar News