×
Ad

ಪರಿಶಿಷ್ಟರ ಮೀಸಲಾತಿ ಹೆಚ್ಚಳ: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

Update: 2022-12-20 19:49 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.20: ಪರಿಶಿಷ್ಟ ಜಾತಿ(ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್‍ಟಿ)ದವರಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ(ಉದ್ಯೋಗ) ಅಥವಾ ಹುದ್ದೆಗಳಲ್ಲಿ ಮೀಸಲಾತಿ ಪ್ರಮಾಣವನ್ನು ಎಸ್‍ಸಿ-ಶೇ.17 ಹಾಗೂ ಎಸ್‍ಟಿ-ಶೇ.7ಕ್ಕೆ ಹೆಚ್ಚಿಸುವ ಸಂಬಂಧ ವಿಧೇಯಕವನ್ನು ಸರಕಾರ ಮಂಡಿಸಿದೆ.

ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಧೇಯಕವನ್ನು ಮಂಡಿಸಿದರು.

ವಿಧೇಯಕದಲ್ಲಿ ಏನಿದೆ?: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆ ಮತ್ತು ಅವು ಒಳಗೊಳ್ಳುವ ಜಾತಿಗಳ ಸಂಖ್ಯೆ ಹೆಚ್ಚಾಗಿದ್ದರೂ ಅವರಿಗೆ ಕಲ್ಪಿಸಲಾದ ಮೀಸಲಾತಿಯು 1958ನೆ ಸಾಲಿನಲ್ಲಿ ಇದ್ದಂತೆ ಎಸ್‍ಸಿಗಳಿಗೆ ಶೇ.15 ಹಾಗೂ ಎಸ್‍ಟಿಗಳಿಗೆ ಶೇ.3ರಂತೆ ಉಳಿದುಕೊಂಡು ಬಂದಿದೆ.

ಪ್ರಸ್ತುತ ಇರುವ ಎಸ್‍ಸಿ ಮೀಸಲಾತಿ ಶೇ.15 ರಿಂದ ಶೇ.17 ಹಾಗೂ ಎಸ್‍ಟಿಗೆ ಇರುವ ಶೇ.3ರಷ್ಟು ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಮೀಸಲಾತಿ ಹೆಚ್ಚಳ ಸಂಬಂಧ ರಾಜ್ಯ ಸರಕಾರ ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಅಲ್ಲದೆ, ಅಧ್ಯಾದೇಶ(ಸುಗ್ರೀವಾಜ್ಞೆ)ವನ್ನು ಹೊರಡಿಸಿತ್ತು. ಇದೀಗ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಿದೆ.

ಸಾರ್ವಜನಿಕ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳೆರಡರಲ್ಲಿಯೂ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂದು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರು ನಿರಂತರವಾಗಿ ಬೇಡಿಕೆ ಮತ್ತು ಮನವಿಯನ್ನು ಮಾಡುತಿದ್ದರು ಹಾಗೂ ನಾಯಕ ವಿದ್ಯಾರ್ಥಿ ಸಂಘವು ಹೈಕೋರ್ಟ್ ಮೊರೆ ಹೋಗಿದೆ. ಅವರ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಸರಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಮಾಡಿತ್ತು. ಆಯೋಗವು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ನೀಡಿ, ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನದಿಂದ ಆಗಬಹುದಾದ ಪರಿಣಾಮಗಳ ಕುರಿತು ಅವಲೋಕಿಸಲು ಸರಕಾರವು ನ್ಯಾ.ಸುಭಾಷ್ ಬಿ.ಅಡಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ನೇಮಕ ಮಾಡಿತ್ತು.

ನ್ಯಾ.ಸುಭಷ್ ಬಿ. ಅಡಿ ಅಧ್ಯಕ್ಷತೆಯ ಸಮಿತಿಯು ಎಸ್‍ಸಿ-ಎಸ್‍ಸಿಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ನೀಡಿದ ವರದಿಯನ್ನಾಧರಿಸಿ ರಾಜ್ಯ ಸರಕಾರವು ಪರಿಶಿಷ್ಟರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ಈಗಾಗಲೇ ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರುವುದರಿಂದ ರಾಜ್ಯದಲ್ಲಿಯೂ ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರಕಾರವು ನಿರ್ಧರಿಸಿದೆ.

Similar News