ಚಿಕ್ಕಮಗಳೂರು: ಯುವಕ - ಯುವತಿ ಆತ್ಮಹತ್ಯೆ
ಚಿಕ್ಕಮಗಳೂರು: ತಮ್ಮ ಪ್ರೀತಿಗೆ ಹೆತ್ತವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದ ಪ್ರೇಮಿಗಳಿಬ್ಬರು ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.
ಆಲ್ದೂರು ಹೋಬಳಿ ವ್ಯಾಪ್ತಿಯ ಕಲ್ಲುಗುಡ್ಡೆಯ ದೇವಗಿರಿ ಎಸ್ಟೇಟ್‍ನಲ್ಲಿ ಕೂಲಿ ಕಾರ್ಮಿಕನಾಗಿದ್ದ ದರ್ಶನ್(21), ಸಕಲೇಶಪುರ ತಾಲೂಕಿನ ಹಾನುಬಾಳು ನಿವಾಸಿ ಪೂರ್ವಿಕಾ (19) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ.
ಪೂರ್ವಿಕಾ ಮಂಗಳೂರಿನ ಮೀನು ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪೂರ್ವಿಕಾ, ಆಣೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದರ್ಶನ್ ನಡುವೆ ಗೆಳೆತನ ಬೆಳೆಸಿದ್ದರೆನ್ನಲಾಗಿದ್ದು, ಇವರಿಬ್ಬರ ಪ್ರೀತಿಗೆ ಎರಡು ಮನೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.
ಮಂಗಳವಾರ ಸಂಜೆ ಆಲ್ದೂರು ಹೋಬಳಿಯ ಗಲ್ಲನ್ ಪೇಟೆ ಸಮೀಪದಲ್ಲಿರುವ ಸತ್ತಿಹಳ್ಳಿಯ ಜಯಪ್ಪ ಎಂಬುವರ ಪಾಳುಬಿದ್ದ ಜಮೀನಿನಲ್ಲಿದ್ದ ಹಲಸಿನ ಮರಕ್ಕೆ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಲ್ದೂರು ಪೊಲೀಸ್‍ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.