ಜಮ್ಮುಕಾಶ್ಮೀರ: ಗುಂಡಿನ ಕಾಳಗ; ಮೂವರು ಶಂಕಿತ ಉಗ್ರರು ಸಾವು

Update: 2022-12-20 17:15 GMT

ಶ್ರೀನಗರ, ಡಿ. 20:  ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆ ಹಾಗೂ ಶಂಕಿತ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್  ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಉಗ್ರರು ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬಕ್ಕೆ ಸೇರಿದವರು ಎಂದು ಅವರು ಮಾಹಿತಿ ನೀಡಿದ್ದಾರೆ.

ಉಗ್ರರು ಇರುವ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಭದ್ರತಾ ಪಡೆಗಳು ಶೋಪಿಯಾನದ ಝೈನಪೋರಾ ಪ್ರದೇಶದ ಮುಂಜ್ ಮಾರ್ಗ್ ಅನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದವು. ಈ ಶೋಧ ಕಾರ್ಯಾಚರಣೆ ಗುಂಡಿನ ಕಾಳಗಕ್ಕೆ ತಿರುಗಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಮೃತಪಟ್ಟ ಓರ್ವ ಶಂಕಿತ ಉಗ್ರನನ್ನು ಲತೀಫ್ ಲೋನೆ ಎಂದು ಗುರುತಿಸಲಾಗಿದೆ. ಈತ ಕಾಶ್ಮೀರ ಪಂಡಿತ್ ಪುರಾಣ ಕೃಷ್ಣ ಭಟ್ ಎಂಬವರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ.  

ಇನ್ನೋರ್ವ ಶಂಕಿತ ಉಗ್ರನನ್ನು ಉಮರ್ ನಝೀರ್ ಎಂದು ಗುರುತಿಸಲಾಗಿದೆ. ಈತ ನೇಪಾಳದ ವ್ಯಕ್ತಿಯೋರ್ವನನ್ನು ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಮೂರನೆ ಶಂಕಿತ ಉಗ್ರನ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಒಂದು ಎ.ಕೆ. 47 ಹಾಗೂ ಪಿಸ್ಟೂಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News