ಶಿಯೋಮಿ ಎಫ್‍ಡಿ ವಶಕ್ಕೆ ಪಡೆಯುವ ಐಟಿ ಆದೇಶ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು, ಡಿ.21: ಶಿಯೋಮಿ ಟೆಕ್ನಾಲಜಿ ಕಂಪೆನಿಯ ನಿಶ್ಚಿತ ಠೇವಣಿ(ಎಫ್‍ಡಿ)ಗಳಿಂದ 3,700 ಕೋಟಿ ರೂ. ವಶಕ್ಕೆ ಪಡೆಯುವ ಸಂಬಂಧ ನಗರದ ಆದಾಯ ತೆರಿಗೆ ಇಲಾಖೆ(ಐಟಿ) ಉಪ ಆಯುಕ್ತರು ಜಾರಿಗೊಳಿಸಿದ್ದ ನೋಟಿಸ್‍ನ್ನು ಹೈಕೋರ್ಟ್ ರದ್ದುಪಡಿಸಿದೆ.
ನೋಟಿಸ್‍ನ್ನು ಪ್ರಶ್ನಿಸಿ ಶಿಯೋಮಿ ಟೆಕ್ನಾಲಜಿ ಕಂಪೆನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ನಿಶ್ಚಿತ ಠೇವಣಿ(ಎಫ್‍ಡಿ)ಗಳಿಂದ 3,700 ಕೋಟಿ ರೂ.ಗಳ ವಶಕ್ಕೆ ಪಡೆಯುವ ಕಳೆದ ಆಗಸ್ಟ್ 11ರಂದು ನಗರದ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು.
ಅಲ್ಲದೆ, ಚೀನಾ ಕಂಪೆನಿಗಳಿಗೆ ಪರಿಹಾರ ನೀಡುವಾಗ ನ್ಯಾಯಾಲಯವು ಕೆಲವು ಷರತ್ತುಗಳನ್ನು ನಿಗದಿಪಡಿಸಿದೆ. ಅಲ್ಲದೆ, ಭಾರತದ ಹೊರಗಿನ ಯಾವುದೇ ಕಂಪೆನಿಗಳು ಸ್ಥಿರ ಠೇವಣಿ ಖಾತೆಗಳಿಂದ ರಾಯಧನ ರೂಪದಲಿ ಪಾವತಿ ಮಾಡಲು ಅರ್ಹತೆ ಹೊಂದಿರುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಪ್ರತಿವಾದಿಯಾಗಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿಯೋಮಿ ಸಂಸ್ಥೆಯ 2019-20, 2020-21, ಮತ್ತು 2022-23ರ ಆರ್ಥಿಕ ವರ್ಷದ ಆದಾಯದ ಮೌಲ್ಯಮಾಪನ ಪ್ರಕ್ರಿಯೆಗಳನ್ನು 2023ರ ಮಾರ್ಚ್ 31ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ ನೀಡಿದೆ.