ಆಟೋ, ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಭಾರತ್ ಅಡಿ ಉಚಿತ ಚಿಕಿತ್ಸೆ: ಸಚಿವ ಶ್ರೀರಾಮುಲು

Update: 2022-12-21 17:07 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.21: ಆಟೋ ಹಾಗೂ ಕ್ಯಾಬ್ ಚಾಲಕರಿಗೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೊಗ್ಯ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. 

ಬುಧವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಮಂಜುನಾಥ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರವು 2011-12ನೆ ಸಾಲಿನಿಂದ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಎನ್ನುವ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

2016-17ನೇ ಸಾಲಿನಲ್ಲಿ ಚಾಲಕರೊಂದಿಗೆ ನಿರ್ವಾಹಕರು ಹಾಗು ಕ್ಲೀನರ್ಸ್‍ಗಳಿಗೂ ಅಪಘಾತ ವಿಮಾ ಸೌಲಭ್ಯವನ್ನು ವಿಸ್ತರಿಸಲು ಪರಿಷ್ಕೃತ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೆ ತರಲಾಗಿದೆ.ಈ ಯೋಜನೆಯಲ್ಲಿ ಅಪಘಾತದಿಂದ ಮರಣಹೊಂದಿದ ಪ್ರಕರಣಗಳಲ್ಲಿ ನಾಮನಿರ್ದೇಶಿತರಿಗೆ 5 ಲಕ್ಷ ರೂ.ಪರಿಹಾರ, ಸಂಪೂರ್ಣ ಶಾಶ್ವತ ದುರ್ಬಲತೆ ಪ್ರಕರಣಗಳಲ್ಲಿ ಫಲಾನುಭವಿಗಳಿಗೆ 5ಲಕ್ಷ ರೂ.ವರೆಗೆ ಪರಿಹಾರ ಮತ್ತು ಒಳರೋಗಿಯಾಗಿ ಚಿಕಿತ್ಸೆ ಪಡೆದ್ದಲ್ಲಿ 1 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚದ ಮರುಪಾವತಿ ನೀಡಲಾಗುತ್ತದೆ ಎಂದು ಶ್ರೀರಾಮುಲು ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆಟೋಚಾಲಕ ಹಾಗೂ ಕ್ಯಾಬ್ ಚಾಲಕ ಒಳಗೊಂಡಂತೆ ಆರ್ಥಿಕವಾಗಿ ಹಿಂದುಳಿದ ವರ್ಗದ ಅರ್ಹ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕೋವಿಡ್-19ರ ಒಂದನೇ ಅಲೆಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರದಿಂದ ಜೀವನೋಪಾಯಕ್ಕೆ ಒಮ್ಮೆ ಪರಿಹಾರ ಧನವನ್ನಾಗಿ 2020-21 ನೇ ಸಾಲಿನಲ್ಲಿ 5 ಸಾವಿರ ರೂ.ಮತ್ತು ಎರಡನೇ ಅಲೆ ಹಿನ್ನೆಲೆಯಲ್ಲಿ 3 ಸಾವಿರ ರೂ.ಮಂಜೂರು ಮಾಡಲಾಗಿದೆ ಎಂದು ಶ್ರೀರಾಮುಲು ತಿಳಿಸಿದರು.

Similar News