×
Ad

ವಿಜಯಪುರ-ಮಂಗಳೂರು ರೈಲು ಖಾಯಂ ಎಕ್ಸ್‌ಪ್ರೆಸ್ ರೈಲಾಗಿ ಪರಿವರ್ತನೆಯಾಗಲಿ

ರೈಲು ಬವಣೆ

Update: 2022-12-22 09:49 IST

ಸಹಸ್ರಾರು ಜನರ ನಿರಂತರ ಒತ್ತಾಯದಿಂದಾಗಿ, 24 ತಿಂಗಳುಗಳ ಹಿಂದೆ, ಪ್ರಾಯೋಗಿಕವಾಗಿ, ರೈಲು ಸಂಖ್ಯೆ 07377/ 07378 ಬಿಜಾಪುರ - ಮಂಗಳೂರು ಜಂಕ್ಷನ್ ರೈಲನ್ನು ಆರಂಭಿಸಿದ್ದರು. ಈ ರೈಲು ವಿಜಯಪುರ, ಬೆಳಗಾವಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ, ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು, ಬಂಟ್ವಾಳ ಮಾರ್ಗವಾಗಿ ಮಂಗಳೂರು ಜಂಕ್ಷನ್‌ಗೆ ಬರುತ್ತದೆ.

ರೈಲು ಪ್ರಯಾಣಿಕರಿಗೆ, ಈ ರೈಲು ತನ್ನ 783 ಕಿಲೋ ಮೀಟರ್ ದೂರವನ್ನು, 18 ಗಂಟೆ 10 ನಿಮಿಷಗಳೊಳಗೆ, ತೀರಾ ಹತ್ತಿರದ ದಾರಿಯಿಂದ ಮಂಗಳೂರು ಬಿಜಾಪುರ ಮಧ್ಯೆ ಪ್ರಮುಖ ಕೊಂಡಿಯಂತಾಗಿದೆ.

 ಇದೀಗ, ಪ್ರತಿದಿನವೂ, ಈ ವಿಜಯಪುರ- ಮಂಗಳೂರು ಜಂಕ್ಷನ್ ರೈಲಿನ ಎಲ್ಲಾ ಸೀಟುಗಳು ತುಂಬಿ, ಆರ್‌ಎಸಿಯೂ ಮುಗಿದು, ವೈಟಿಂಗ್ ಲಿಸ್ಟ್ ಪ್ರಯಾಣಿಕರ ಸಂಖ್ಯೆ 687 ದಾಟುತ್ತಿದೆ. ಇದರಿಂದಾಗಿ ಈ ರೈಲಿಗೆ ಇನ್ನೂ 8 ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಅಳವಡಿಸಲಾಗಿದೆ. ಆದರೂ ಇಂದಿಗೂ ಈ ರೈಲಲ್ಲಿ ಕನ್ಫರ್ಮ್ ಸೀಟು ಸಿಗುತ್ತಿಲ್ಲ. 

ಭಾರತೀಯ ರೈಲು ನಿಯಮಾವಳಿಗಳ ಪ್ರಕಾರ, ಈ ರೀತಿಯ ಜನಸ್ಪಂದನೆ ದೊರಕಿದರೆ, 3 ತಿಂಗಳೊಳಗೆ, ವಿಶೇಷ ರೈಲಿನ ಸ್ಥಾನಮಾನವನ್ನು ತೆಗೆದುಹಾಕಿ, ಖಾಯಂ ಎಕ್ಸ್‌ಪ್ರೆಸ್ ರೈಲನ್ನಾಗಿ ಪರಿವರ್ತನೆ ಮಾಡಬೇಕು. ಆದರೆ ಎರಡು ವರ್ಷಗಳಿಂದಲೂ ಈ ರೈಲನ್ನು ಇನ್ನೂ ವಿಶೇಷ ರೈಲಾಗಿಯೇ ಓಡಿಸಲಾಗುತ್ತಿದೆ. ಹೀಗಾಗಿ ದಕ್ಷಿಣ ಕನ್ನಡದ ಸಂಸದರು ಈ ರೈಲನ್ನು; ಖಾಯಂ ಆಗಿ ಓಡಿಸಲು ರೈಲು ಮಂತ್ರಿಗಳಿಗೆ ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದರು.

ಈ ರೈಲು, ಬೆಳಗಾವಿ, ಬಾಗಲಕೋಟೆ, ಬಾದಾಮಿ ಕಡೆಯಿಂದ ಕೂಲಿಕಾರ್ಮಿಕರು; ಗದಗದಿಂದ ಪಠ್ಯ ಹಾಗೂ ಗೈಡ್ ಪುಸ್ತಕಗಳು; ಬ್ಯಾಡಗಿಯಿಂದ ಕೆಂಪು ಮೆಣಸಿನಕಾಯಿ; ಹಾಸನ ಸಕಲೇಶಪುರದಿಂದ ತರಕಾರಿ, ಶುಂಠಿ, ಹಸಿ ಮೆಣಸಿನಕಾಯಿ, ಈರುಳ್ಳಿ, ಬಟಾಟೆ ಇತ್ಯಾದಿ ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 

ಸಾವಿರಾರು ವೈದ್ಯ, ಇಂಜಿನಿಯರಿಂಗ್ ಹಾಗೂ ಇತರ ಕಾಲೇಜು ಆಸ್ಪತ್ರೆಗಳಿಗೆ ಬರುವವರಿದ್ದಾರೆ. ಹಾಗಾಗಿ ವಿಜಯಪುರ-ಮಂಗಳೂರು ಜಂಕ್ಷನ್ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು ಇದೇ ಮಾರ್ಗವಾಗಿ ಇನ್ನೂ ಒಂದು ಹೆಚ್ಚುವರಿ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ವಿಜಯಪುರ ಮಂಗಳೂರು ಜಂಕ್ಷನ್ ಮಧ್ಯ ವಾಸಿಸುವ ಜನರು ನಿರಂತರವಾಗಿ ಆಯಾಯ ಪ್ರದೇಶದ ಸಂಸದ ಶಾಸಕರನ್ನು ಒತ್ತಾಯಿಸುತ್ತಿದ್ದಾರೆ. ಆದರೆ ರೈಲು ಇಲಾಖೆ ಮಾತ್ರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ.

 ಆದರೆ ಕೆಲ ಸ್ಥಾಪಿತ ಹಿತಾಸಕ್ತಿಗಳು ಬಸ್ ಲಾಬಿ ಜೊತೆ ಸೇರಿಕೊಂಡು ಈ ರೈಲು ಈಗ ಚಲಿಸುವ ಕರ್ನಾಟಕದ ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗದ ಬದಲಾಗಿ; ಅದನ್ನು ಕರ್ನಾಟಕದಿಂದ ಹೊರಗೆ ಗೋವಾ, ಲೋಂಡಾ, ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ ಕೊಂಡೊಯ್ಯಲು ಸಂಚು ಮಾಡುವ ವಿಷಯ ಬೆಳಕಿಗೆ ಬಂದಿದೆ.

ರೈಲು ಈಗ ಚಲಿಸುವ ಹಾಸನ - ಅರಸೀಕೆರೆ ಮಾರ್ಗವೇ ಸೂಕ್ತ ಹಾಗೂ ಯಾವುದೇ ಕಾರಣಕ್ಕೂ ಗೋವಾ ಮುಖಾಂತರ ಸಂಚರಿಸುವ ರೀತಿಯಲ್ಲಿ ಮಾರ್ಗ ಬದಲಾವಣೆ ಮಾಡಬಾರದು ಅಂತ ವಿಜಯಪುರ, ಹುಬ್ಬಳ್ಳಿ, ದಾವಣಗೆರೆ ಹಾಗೂ ಹಾಸನ ಪ್ರಯಾಣಿಕ ಸಂಘಟನೆಗಳು ಈಗಾಗಲೇ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಅಂತ ತಿಳಿದು ಬಂದಿದೆ. ಮನವಿಯಲ್ಲಿ ಈ ಕೆಳಗಿನ ವಿಷಯಗಳನ್ನು ಉಲ್ಲೇಖಿಸಲಾಗಿದೆ. 1.ಗೋವಾ ಮಾರ್ಗದ ಮೂಲಕ ಸಂಚರಿಸಿದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ 2. ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಹುಬ್ಬಳ್ಳಿ - ವಿಜಯಪುರದಿಂದ ಬರುವ ಸಾವಿರಾರು ಭಕ್ತರಿಗೆ ಗೋವಾ ಮಾರ್ಗದಿಂದ ರೈಲು ಸಂಚರಿಸಿದರೆ; ಪ್ರಯಾಣದ ಅವಧಿ ಈಗಿರುವುದಕ್ಕಿಂತ ಕೆಲವು ಘಂಟೆ ಹೆಚ್ಚಾಗುತ್ತದೆ ಮತ್ತು ಟಿಕೆಟ್ ದರ ಸಹ ಹೆಚ್ಚಾಗುತ್ತದೆ.

3. ಈಗಿನ ಮಂಗಳೂರು ಜಂಕ್ಷನ್-ಅರಸೀಕೆರೆ- ದಾವಣಗೆರೆ-ವಿಜಯಪುರ ಮಾರ್ಗವು 783 ಕಿಲೋ ಮೀಟರ್ ಉದ್ದವಿದೆ. ಮಂಗಳೂರು ಜಂಕ್ಷನ್-ಮಡಗಾಂವ್-ಲೋಂಡಾ ಮುಖಾಂತರ ಹೋದರೆ ಸುಮಾರು 100 ಕಿ.ಮೀ. ಹೆಚ್ಚಾಗಲಿದೆ. 4. ಈ ಮಾರ್ಗವು ಅತ್ಯಂತ ಉದ್ದವಾದುದರಿಂದ, ಹೆಚ್ಚು ಟಿಕೆಟ್ ದರ, ಹೆಚ್ಚಿನ ಪ್ರಯಾಣದ ಅವಧಿ ಹಾಗೂ ಅತಿ ಹೆಚ್ಚಿನ ಶ್ರಮ ಬೇಕಾಗುತ್ತದೆ. 5. ಇಂಜಿನ್‌ಗೆ ಹೆಚ್ಚು ದೂರ ಕ್ರಮಿಸಲು ಹೆಚ್ಚಿನ ವಿದ್ಯುತ್, ಡೀಸೆಲ್ ಇಂಜಿನ್ ಆಗಿದ್ದರೆ ಹೆಚ್ಚಿನ ಡೀಸೆಲ್ ಬೇಕು. ಅಂತೆಯೇ ದೂರ ಹೆಚ್ಚಾದಂತೆ ಚಲಿಸುವ ಟಿಕೆಟ್ ಪರಿವೀಕ್ಷಕರ, ಗಾರ್ಡ್‌ಗಳ ಹಾಗೂ ಲೋಕೋ ಇಂಜಿನ್ ಪೈಲೆಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತಾರೆ.

5. ಮಂಗಳೂರಿನಿಂದ ಸಂಜೆ 4:30ಕ್ಕೆ ಹೊರಟು ಮರುದಿನ ಮಂಜಾನೆ 4:30ರ ಒಳಗೆ ಹುಬ್ಬಳ್ಳಿ ತಲುಪಿ; ಬೆಳಗ್ಗೆ 10:30ರೊಳಗೆ ವಿಜಯಪುರ ತಲುಪಬೇಕು. ಅಂತೆಯೇ, ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು, ಹುಬ್ಬಳ್ಳಿ ರಾತ್ರಿ 10 ಗಂಟೆಯ ಹೊತ್ತಿಗೆ ತಲುಪಿ, ಮರುದಿನ ಬೆಳಗ್ಗೆ 10:30ರೊಳಗೆ ಮಂಗಳೂರು ತಲುಪಬೇಕು. ಆದುದರಿಂದ ವಿಜಯಪುರ ವಯಾ ದಾವಣಗೆರೆ ಅರಸೀಕೆರೆ-ಮಂಗಳೂರು ವಿಶೇಷ ಎಕ್ಸ್‌ಪ್ರೆಸ್‌ನ್ನು; ಸಾಮಾನ್ಯ ಎಕ್ಸ್‌ಪ್ರೆಸ್ ರೈಲನ್ನಾಗಿ ಪರಿವರ್ತಿಸಿ ಮೇಲೆ ಸೂಚಿಸಿದ ವೇಳಾಪಟ್ಟಿಯೊಂದಿಗೆ ಓಡಿಸಬೇಕಾಗಿ ವಿನಂತಿ.

ವಿಜಯಪುರದಿಂದ ಗೋವಾ - ಕುಂದಾಪುರ ಮಾರ್ಗವಾಗಿ ಹೊಸ ರೈಲು ಬೇಡಿಕೆ ಇಡಲಿ, ಅದು ಬಿಟ್ಟು ಈಗಿರುವ ರೈಲಿನ ಮಾರ್ಗ ಬದಲಾವಣೆ ಖಂಡಿತ ನ್ಯಾಯಯೋಚಿತವಲ್ಲ. ಖಾಸಗಿ ಬಸ್‌ನವರಿಗೆ ಲಾಭ ಮಾಡಿ ಕೊಡುವ ದುರುದ್ದೇಶದಿಂದ ಈ ಸಂಚು ಮಾಡಲಾಗಿದೆಯೇನೋ ಎಂದು ಅನಿಸುತ್ತಿದೆ.