ಸರಕಾರ ‘ಬೀಫ್’ ರಫ್ತು ಮಾಡುವ ಕಂಪೆನಿಗಳಿಗೆ ‘ಹಲಾಲ್ ಪ್ರಮಾಣ ಪತ್ರ’ ನಿಷೇಧಿಸಲಿ: ನಸೀರ್ ಅಹ್ಮದ್ ಸವಾಲು

Update: 2022-12-22 13:23 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ರಾಜ್ಯದಲ್ಲಿ ಆಹಾರ ಪದಾರ್ಥಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸುವಂತೆ ಕೋರಿ ಬಿಜೆಪಿ ವಿಧಾನಪರಿಷತ್ ಸದಸ್ಯರೊಬ್ಬರು ಖಾಸಗಿ ವಿಧೇಯಕ ಮಂಡನೆ ಮಾಡಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಆದರೆ, ನಮ್ಮ ದೇಶದಿಂದ ವಿದೇಶಗಳಿಗೆ ಬೀಫ್ ರಫ್ತು ಮಾಡುವ ಕಂಪೆನಿಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸಲಿ ನೋಡೋಣ ಎಂದು ಕಾಂಗ್ರೆಸ್  ಸದಸ್ಯ ನಸೀರ್ ಅಹ್ಮದ್ ಸವಾಲು ಹಾಕಿದ್ದಾರೆ.

ಗುರುವಾರ ಪರಿಷತ್ತಿನ ವಿರೋಧ ಪಕ್ಷದ ಮೊಗಸಾಲೆಯಲ್ಲಿ ‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ‘ಬೀಫ್ ರಫ್ತು ಮಾಡುವ ದೊಡ್ಡ ದೊಡ್ಡ ಕಂಪೆನಿಗಳು ಸಂಘಪರಿವಾರದವರಿಗೆ ಸೇರಿದ್ದಾಗಿದೆ. ಅವರಿಗೆ ಸರಕಾರ ನೀಡುತ್ತಿರುವ ಹಲಾಲ್ ಪ್ರಮಾಣ ಪತ್ರವನ್ನು ನಿಷೇಧಿಸುವಂತೆ ಆಗ್ರಹಿಸುವ ತಾಕತ್ತು ಬಿಜೆಪಿ ಸದಸ್ಯರಿಗೆ ಇದೆಯೇ? ಎಂದು ಪ್ರಶ್ನಿಸಿದರು.

‘ಯಾರೊಬ್ಬರೂ ಪ್ರಮಾಣ ಪತ್ರಗಳನ್ನು ನೋಡಿ ಊಟ ಮಾಡುವುದಿಲ್ಲ. ಆಹಾರ ಆಯ್ಕೆಯೂ ಸಂವಿಧಾನ ಬದ್ಧವಾಗಿ ಲಭ್ಯವಿರುವ ಮೂಲಭೂತ ಹಕ್ಕು. ಅದನ್ನು ನಿರ್ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ದ್ವೇಷ ಹರಡಿಸಲು, ಅಶಾಂತಿಯನ್ನು ಉಂಟು ಮಾಡುವುದೆ ಇವರ ಕೆಲಸವಾಗಿದೆ. ಸದನದಲ್ಲಿ ಈ ಖಾಸಗಿ ವಿಧೇಯಕ ಮಂಡನೆಯಾದರೆ ಖಂಡಿತವಾಗಿಯೂ ನಾವು ವಿರೋಧ ವ್ಕಕ್ತಪಡಿಸುತ್ತೇವೆ’ ಎಂದು ನಸೀರ್ ಅಹ್ಮದ್ ಹೇಳಿದರು.

ರಾಜ್ಯ ಸರಕಾರವು ವಧಾಗಾರಗಳು, ಜಾನುವಾರುಗಳ ವಧೆಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ನೀಡಬಹುದು. ಆದರೆ, ಹಲಾಲ್ ಕುರಿತು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

Similar News