ಗಡಿ ವಿವಾದ | ಮಹಾರಾಷ್ಟ್ರ ನಾಯಕರ ನಡೆ ವಿರೋಧಿಸಿ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ

Update: 2022-12-22 14:11 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ‘ರಾಜ್ಯದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಕರ್ನಾಟಕ ವಿಧಾನಸಭೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.

ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನಾಯಕರ ವರ್ತನೆಯನ್ನು ಸದನವು ಸರ್ವಾನು ಖಂಡಿಸುತ್ತದೆ’ ಎಂದು ಪ್ರಕಟಿಸಿದರು.

‘ಗಡಿ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಶಾಸಕಸಭೆಯ ಸದಸ್ಯರೆಲ್ಲರ ಭಾವನೆಯು ಒಂದೇ ಆಗಿದ್ದು, ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ಮಹಾರಾಷ್ಟ್ರ ಅನಾವಶ್ಯಕವಾಗಿ ಸೃಷ್ಟಿಸಿರುವ ಗಡಿ ವಿವಾದವನ್ನು ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.

‘ಅನಗತ್ಯವಾಗಿ ಮಹಾರಾಷ್ಟ್ರ ಸಚಿವರು, ಅಲ್ಲಿನ ರಾಜಕೀಯ ಮುಖಂಡರ ಪ್ರಚೋದನೆಯನ್ನು ಸಹಿಸಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ತಕ್ಕ ಉತ್ತರ ನೀಡಲಿದ್ದೇವೆ. ಜತೆಗೆ ಗಡಿ ಭಾಗದ ಜನರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ’ ಎಂದು ಅವರು ತಿಳಿಸಿದರು.

‘ಈಗಾಗಲೇ ಮಹಾಜನ ಆಯೋಗದ ವರದಿ ಮಂಡಿಸಿ 60 ವರ್ಷ ಕಳೆದಿವೆ. ಈಗಾಗಲೇ ಎರಡೂ ರಾಜ್ಯಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಮಹಾರಾಷ್ಟ್ರ ಈಗಾಗಲೇ ಮುಗಿದು ಹೋದ ಅಧ್ಯಾಯ ರಾಜ್ಯಗಳ ಜನರು ಕರ್ನಾಟಕದ ಗಡಿ ವಿಚಾರ.ಆದಾಗ್ಯೂ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಗಡಿಯ ಬಗ್ಗೆ ದಾವೆ ಹೂಡಿ, ಅಂದಲೂ ಎರಡೂ ರಾಜ್ಯಗಳ ಜನರ ನಡುವಿನ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದೆ.ಇದು ಅತ್ಯಂತ ಖಂಡನೀಯ’ ಎಂದು ಅವರು ಹೇಳಿದರು.

2004ರಿಂದ ಇಲ್ಲಿಯವರೆಗೂ ಸುಪ್ರೀಂ ಕೋರ್ಟಿನಲ್ಲಿ ಮಹಾರಾಷ್ಟ್ರದ ದಾವೆ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ ಸಂವಿಧಾನದ 3ನೆ ಪರಿಚ್ಛೇದದ ಪ್ರಕಾರ ಈ ಮರುಪರಿಶೀಲನೆ ಮಾಡುವ ಪರಮಾಧಿಕಾರ ಈ ದೇಶದ ಪ್ರಜಾಪ್ರಭುತ್ವದ ಉನ್ನತ ಸಂಸ್ಥೆಯಾದ ಸಂಸತ್ತಿಗೆ ಮಾತ್ರ ಇದೆ.ಇದರ ಬಗ್ಗೆ ರಾಜ್ಯ ಸರಕಾರ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣ ಆಯೋಗವನ್ನು ರಚಿಸಿದ್ದು, ಈ ಆಯೋಗವು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದೆ ಎಂದರು.

ಅಲ್ಲದೆ, ಇತ್ತೀಚೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ಶಿವರಾಜ ಪಾಟೀಲ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ, ನಮ್ಮ ನಿಲುವನ್ನು ಸಮರ್ಥವಾಗಿ ಪ್ರತಿಪಾದನೆ ಮಾಡಲು ಅವರ ಮಾರ್ಗದರ್ಶನ ಪಡೆಯಲಾಗುತ್ತಿದೆ.ಮತ್ತು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾವಾದಿ ಮುಕುಲ್ ರೋಹಟಿಗಿ ನೇತೃತ್ವದಲ್ಲಿ ಐದು ಜನ ನುರಿತ ವಕೀಲರ ತಂಡ ರಚನೆ ಮಾಡಲಾಗಿದೆ.

ಕೇಂದ್ರದ ಗೃಹ ಸಚಿವರು ಎರಡೂ ರಾಜ್ಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆಯರು ಕಾಪಾಡಿಕೊಳ್ಳಲು ನೀಡಿರುವ ಸಲಹೆಯನ್ನು ಮಹಾರಾಷ್ಟ್ರ ಉಲ್ಲಂಘಿಸುತ್ತಿದ್ದು, ಎರಡೂ ರಾಜ್ಯಗಳ ಸಂಬಂಧಕ್ಕೆ ಧಕ್ಕೆ ಇದನ್ನು ನಿಯಂತ್ರಿಸಬೇಕೆಂದು ಸೂಚಿಸುತ್ತಾ, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೂ ರಾಜ್ಯ ಸರಕಾರವೂ ತರುತ್ತದೆ ಎಂದು ಅವರು ಹೇಳಿದರು.

‘ಕರ್ನಾಟಕದ ನೆಲ, ಜಲದ ಕಾನೂನಿನ ಹೋರಾಟದ ಸಮರ್ಥನ ಮಾಡಲು ಈ ಮೂಲಕ ರಾಜ್ಯ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ ಮತ್ತು ಮಹಾರಾಷ್ಟ್ರದ ಸಚಿವರು ಕಾನೂನು ಸುವ್ಯವಸ್ಥೆ ಸೂಕ್ಷ್ಮವಿದ್ದಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿ, ಪ್ರಚೋದಿಸಲು ಯತ್ನಿಸುವ ಕಾರ್ಯವೂ ಖಂಡನೀಯ’

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

-------------------------------------------

‘ಮಹಾರಾಷ್ಟ್ರದ ಸಂಜಯ್ ರಾವತ್ ದೇಶದ್ರೋಹಿ.ಅವರು ಚೀನಾ ಏಜೆಂಟ್ ಇರಬಹುದೆಂಬಸಂಶಯವಿದೆ. ಅವರಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದೇ ರೀತಿ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಪ್ರಚೋದನೆ ಮಾಡಿದರೆ ಸೈನಿಕರ ರೀತಿಯಲ್ಲೇ ಹಿಮ್ಮೆಟ್ಟಿಸುತ್ತೇವೆಂಬ ಅವರು ಮೊದಲು ತಮ್ಮ ರಾಜ್ಯದಲ್ಲಿರುವ ಜನರನ್ನು ರಕ್ಷಣೆ ಮಾಡಲಿ’

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Similar News