ಕೋವಿಡ್ ಹೆಸರಲ್ಲಿ 'ಪಂಚರತ್ನ ರಥಯಾತ್ರೆ' ನಿಲ್ಲಿಸಲು ಕೇಶವಕೃಪಾದಲ್ಲಿ ಹುನ್ನಾರ: ಕುಮಾರಸ್ವಾಮಿ ಆರೋಪ
ಮಂಡ್ಯ, ಡಿ.22: ಅಭೂತಪೂರ್ವ ಯಶಸ್ಸು ಕಾಣುತ್ತಿರುವ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯನ್ನು ನಿಲ್ಲಿಸುವ ಕುರಿತು ಕೇಶವಕೃಪಾದಲ್ಲಿ ಹುನ್ನಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಜನಸಂದಣಿ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಸೂಚಿಸಿರುವುದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪ್ರಧಾನಿ ಮೋದಿಯವರ ಮೂಲಕ ಹೇಗಾದರೂ ಮಾಡಿ ರಥಯಾತ್ರೆಗೆ ಜನರು ಬರುವುದನ್ನು ತಡೆಯಬೇಕೆಂಬ ಹುನ್ನಾರ ಕೇಶವಕೃಪದಲ್ಲಿ ನಡೆದಿದೆ ಎಂಬ ಮಾಹಿತಿ ಇದೆ ಎಂದರು.
ಕೋವಿಡ್ ವಿಚಾರದಲ್ಲಿ ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸರಕಾರ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಅವರು ಗುರುವಾರ ಹನಕೆರೆ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದು, ಅದು ದಿನದಿನಕ್ಕೆ ಹೆಚ್ಚಾಗುತ್ತಿದೆ. ಮಂಡ್ಯದಲ್ಲಂತೂ ಕಳೆದ ಚುನಾವಣೆಗಿಂತ ಈ ಬಾರಿ ಜೆಡಿಎಸ್‍ಗೆ ಇನ್ನೂ ಉತ್ತಮ ವಾತಾವರಣ ಇದೆ. ಸರಕಾರ ರೈತರನ್ನು ಕಡೆಗಣಿಸಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಇಂದು ರೈತರು, ಗ್ರಾಮೀಣ ಪ್ರದೇಶದ ಜನಸಾಮಾನ್ಯರು, ದೀನದಲಿತರ ಬದುಕು ತುಂಬಾ ಸಂಕಷ್ಟದಲ್ಲಿದೆ. ಸರಕಾರದ ಜನವಿರೋಧಿ ನೀತಿಗಳಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ ಇಂದು ರೈತರು, ದೀನದಲಿತರ ಬದುಕಿಗೆ ಜೆಡಿಎಸ್ ಪಕ್ಷದ ಸರಕಾರ ಅನಿವಾರ್ಯ ಎಂಬ ಭಾವನೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದರು.
ಮೀಸಲಾತಿ ಹೆಚ್ಚಳ ಕೂಗಿನ ಹಿನ್ನೆಲೆಯಲ್ಲಿ ಕೆಲವು ಸಮುದಾಯಗಳಿಗೆ ರಾಜ್ಯ ಸರಕಾರ ಭರವಸೆ ನೀಡುತ್ತಿರುವುದು ಚುನಾವಣಾ ಗಿಮಿಕ್ ಆಗಿದೆ. ಚುನಾವಣೆಗೋಸ್ಕರ ಬಿಜೆಪಿ ಸರಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಪಂಚಮಸಾಲಿ ಸೇರಿದಂತೆ ವಿವಿಧ ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿರುವುದರಲ್ಲಿ ತಪ್ಪಿಲ್ಲ. ಆದರೆ, ವೈಜ್ಞಾನಿಕವಾಗಿ, ಕಾನೂನಾತ್ಮಕವಾಗಿ, ವಾಸ್ತವಾಂಶಗಳ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವುದು ಸರಕಾರದ ಜವಾಬ್ಧಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.