ಮಾಲಿನ್ಯಕಾರಕ ಕೈಗಾರಿಕೆಗಳ ವಿರುದ್ಧ ಕ್ರಮ: ಸಚಿವ ಮುರುಗೇಶ್ ನಿರಾಣಿ

Update: 2022-12-23 12:41 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.23: ಬಳ್ಳಾರಿ ನಗರ ಪ್ರದೇಶದಲ್ಲಿನ ಮಾಲಿನ್ಯಕಾರಕ ಕೈಗಾರಿಕೆಗಳನ್ನು ನಗರದ ಹೊಸ ವಲಯದಲ್ಲಿ ಗುರುತಿಸಿರುವ ಪ್ರದೇಶಕ್ಕೆ ಸ್ಥಳಾಂತರ ಆಗುವಂತೆ ನೋಟಿಸ್ ನೀಡಿದ್ದೇವೆ. ಒಂದು ವೇಳೆ ಮಾಲಿನ್ಯ ತಡೆ ನಿಯಮಗಳನ್ನು ಪಾಲಿಸದಿದ್ದರೆಅಂತಹ ಕೈಗಾರಿಕೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸೋಮಶೇಖರ ರೆಡ್ಡಿ ಜಿ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು,  ಬಳ್ಳಾರಿ ನಗರ ಪ್ರದೇಶದಲ್ಲಿ ಗಾಮೆರ್ಂಟ್ಸ್, ರೈಸ್‍ಮಿಲ್, ಕೆಎಂಎಫ್, ಜನರಲ್ ಇಂಜಿನಿಯರಿಂಗ್ ಹಾಗೂ ಇನ್ನಿತರ ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳ ಪ್ರಕಾರ ಇವು ಹಸಿರು ಮತ್ತು ಕಿತ್ತಳೆಯ ವಲಯಕ್ಕೆ ಸೇರಿರುತ್ತವೆ. ಮಂಡಳಿಯು ನೀಡಿರುವ ಸಮ್ಮತಿ ಪತ್ರದ ನಿಬಂಧನೆಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುವ ಕಾರ್ಖಾನೆಗಳ ವಿರುದ್ಧ ಜಲ ಕಾಯ್ದೆ 1974 ಮತ್ತು ಮಾಲಿನ್ಯ ತಡೆ ಕಾಯ್ದೆ 1981ರಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಬಳ್ಳಾರಿ ನಗರಕ್ಕೆ ಸಮೀಪದ ಕುಡಿತಿನಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಕೆಐಎಡಿಬಿಯು ಅಭಿವೃದ್ಧಿ ಪಡಿಸಿದ್ದು, ವೇಣಿವೀರಾಪುರದಲ್ಲಿ 650 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದ್ದು, ಕೈಗಾರಿಕೆಗಳು ಸ್ಥಳಾಂತರಗೊಳ್ಳಲು ಇಚ್ಚಿಸಿದ್ದಲ್ಲಿ ಅಂತಹ ಕೈಗಾರಿಕೆಗಳಿಗೆ ನಿವೇಶನಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

Similar News