ಕನಕಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ RTI ಕಾರ್ಯಕರ್ತನ ಕೊಲೆ

Update: 2022-12-23 14:14 GMT

ಬೆಂಗಳೂರು, ಡಿ.23: ಆರ್ ಟಿಐ ಕಾರ್ಯಕರ್ತರೊಬ್ಬರನ್ನು ತಂಡವೊಂದು ಹಲ್ಲೆಗೈದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ ಎಂಬಲ್ಲಿ ಗುರುವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಹೊನ್ನಿಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲಸಿನರದೊಡ್ಡಿ ನಿವಾಸಿ ಮೂರ್ತಿ(27) ಕೊಲೆಯಾದವರು. 

ಹೊನ್ನಿಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾ ಕಾಮಗಾರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮೂರ್ತಿ ರಾಮನಗರ ಜಿಲ್ಲಾ ಪಂಚಾಯತ್ ಗೆ ದೂರು ನೀಡಿದ್ದು, ಇದೇ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಚಂದನ್ ಸಹಿತ ಇಬ್ಬರನ್ನು ಸಾತನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಹೊನ್ನಿಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾ ಕಾಮಗಾರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಮೂರ್ತಿ ನೀಡಿದ್ದ ದೂರಿನನ್ವಯ ರಾಮನಗರ ಜಿಲ್ಲಾ ಪಂಚಾಯತ್  ಅಧಿಕಾರಿಗಳು ಕಾಮಗಾರಿ ಪರಿಶೀಲನೆಗಾಗಿ ಇತ್ತೀಚೆಗೆ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಚಂದನ್ ಇತರರೊಂದಿಗೆ ಸೇರಿಕೊಂಡು ಮೂರ್ತಿಗೆ ಹಲ್ಲೆಗೈದು ಗಲಾಟೆ ಮಾಡಿದ್ದ ಎಂದು ತಿಳಿದುಬಂದಿದೆ.

ಬಳಿಕ ವಿವಾದ ಇತ್ಯರ್ಥಕ್ಕಾಗಿ ಮೂರ್ತಿ ಹಾಗೂ ಚಂದನ್ನನ್ನು ಪೊಲೀಸರು ಠಾಣೆಗೆ ಕರೆಸಿ ರಾಜಿ ಮಾಡಿಸಿದ್ದರು. ಈ ನಡುವೆ ಗುರುವಾರ ಸಂಜೆ 6:30ರ ಸುಮಾರಿನಲ್ಲಿ ಮೂರ್ತಿ ತಮ್ಮ ರಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಂದನ್ ಕುಟುಂಬದ ಇಬ್ಬರು ಸದಸ್ಯರೊಂದಿಗೆ ಸೇರಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಕುರುಬಳ್ಳಿದೊಡ್ಡಿ ಬಳಿ ಮೂರ್ತಿ ತಲೆ ಮೇಲೆ ಕಲ್ಲು ಎತ್ತಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಚಂದನ್ ಹಾಗೂ ಆತನ ಕುಟುಂಬದ ಇಬ್ಬರು ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Similar News