ರೈತಶಕ್ತಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು...: ತವರಿಗೆ ಮರಳಿದ ದರ್ಶನ್‍ ಪುಟ್ಟಣ್ಣಯ್ಯಗೆ ಅದ್ದೂರಿ ಸ್ವಾಗತ

Update: 2022-12-23 15:03 GMT

ಮಂಡ್ಯ, ಡಿ.23: ಯಾವ ಪಕ್ಷಗಳ ಸರಕಾರಗಳಿಗೂ ರೈತರ ಬಗ್ಗೆ ಕಾಳಜಿ ಇಲ್ಲ. ಆದ್ದರಿಂದ ರೈತಶಕ್ತಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ಅಮೆರಿಕಾದಿಂದ ಮರಳಿರುವ ರೈತಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದ್ದಾರೆ.

ಟನ್ ಕಬ್ಬಿಗೆ 4,500 ರೂ. ನಿಗದಿ ಹಾಗೂ ಹಾಲಿನ ದರ 40 ರೂ.ಗೆ ಹೆಚ್ಚಳಕ್ಕೆ ಆಗ್ರಹಿಸಿ ಒಂದೂವರೆ ತಿಂಗಳಿಂದ ನಗರದಲ್ಲಿ ರೈತಸಂಘ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಗೆ ಆಗ್ರಹಿಸಿ ರೈತರು ಒಂದೂವರೆ ತಿಂಗಳಿಂದ ಚಳವಳಿ ಮಾಡುತ್ತಿದ್ದು, ಸರಕಾರ ಸ್ಪಂದಿಸುತ್ತಿಲ್ಲ. ರೈತರಿಗೆ ನ್ಯಾಯ ಕೊಡಿಸುವ ಕಾಳಜಿ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಕಿಡಿಕಾರಿದರು.

‘ಎಲ್ಲರೂ ಹುಟ್ಟುತ್ತಾರೆ, ಸಾಯುತ್ತಾರೆ. ಈ ಮಧ್ಯೆ ಏನಾದರೂ ಒಳ್ಳೆಯದನ್ನು ಮಾಡಬೇಕು’ ಎಂದು ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಹೇಳುತ್ತಿದ್ದರು. ಆದ್ದರಿಂದ ನಾವು ಹೊಸ ನಡೆನುಡಿಯ ರಾಜಕಾರಣಲು ರಾಜಕೀಯಕ್ಕೆ ಧುಮುಕಿದ್ದೇವೆ. ಎಲ್ಲರೂ ಕೈಜೋಡಿಸಿ ರೈತಸಂಘವನ್ನು ಬಲಿಷ್ಠಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ತಾವು ರೈತರಪರ ಎಂದು ಹೇಳುವ ಜೆಡಿಎಸ್ ಮುಖಂಡರಿಗೆ, ರೈತರು ಅಹೋರಾತ್ರಿ ಧರಣಿ ನಡೆಸುತ್ತಿರುವುದು ಕಾಣದಿರುವುದು ದುರಂತ. ಯಾವ ಶಾಸಕರೂ ಸೌಜನ್ಯಕ್ಕಾದರೂ ರೈತರನ್ನು ಮಾತನಾಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ಭಾಗವಹಿಸಿ ರೈತಪರವಾಗಿ ದನಿಯೆತ್ತದೆ ಪಂಚರತ್ನ ರಥಯಾತ್ರೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ರೈತರ ಬಗ್ಗೆ ಕಾಳಜಿ ಇದ್ದರೆ ಯಾತ್ರೆಯನ್ನು ಮುಂದೂಡಿ ಅಧಿವೇಶನದಲ್ಲಿ ಭಾಗವಹಿಸಿ ರೈತರ ಪರವಾಗಿ ಧನಿ ಎತ್ತಬೇಕು ಎಂದು ತಾಕೀತು ಮಾಡಿದರು.

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಸನ್ನ ಎಸ್.ಗೌಡ, ಹರೀಶ್, ಲಿಂಗಪ್ಪಾಜಿ, ಬಿ.ಬೊಮ್ಮೇಗೌಡ, ರವಿ, ವಿಜಯಕುಮಾರ್, ಇತರೆ ಮುಖಂಡರು ಉಪಸ್ಥಿತರಿದ್ದರು.

ದರ್ಶನ್‍ಗೆ ಅದ್ದೂರಿ ಸ್ವಾಗತ:

ಅಮೆರಿಕಾದಿಂದ ತವರಿಗೆ ಮರಳಿದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ರೈತಸಂಘದ ಕಾರ್ಯಕರ್ತರು ಅದ್ದೂರಿಯಿಂದ ಸ್ವಾಗತಿಸಿದರು. ದುದ್ದ ಗ್ರಾಮದಿಂದ ಮಂಡ್ಯ ನಗರದವರೆಗೆ ಬೈಕ್ ರ್ಯಾಲಿ ಮೂಲಕ ಮೆರವಣಿಗೆಯಲ್ಲಿ ಕರೆ ತರಲಾಯಿತು.

ಹೊಳಲು ಗ್ರಾಮದಲ್ಲೂ ನೂರಾರು ಕಾರ್ಯಕರ್ತರು ಸ್ವಾಗತ ಕೋರಿದರು. ನಂತರ, ಮಂಡ್ಯದಲ್ಲೂ ಬೃಹತ್ ಗಾತ್ರದ ಸೇಬಿನಹಣ್ಣಿನ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ಮಂಡ್ಯದಿಂದಲೂ ಪಾಂಡವಪುರದವರೆಗೆ ಬೈಕ್ ರ್ಯಾಲಿಯ ಮೂಲಕ ಮೆರವಣಿಗೆಯಲಿ ಕರೆದೊಯ್ಯಲಾಯಿತು.

Similar News