ಕೊಡಗಿನ ದುಬಾರೆ ಶಿಬಿರದ 5 ಸಾಕಾನೆಗಳು ಮಧ್ಯಪ್ರದೇಶಕ್ಕೆ ಸ್ಥಳಾಂತರ

Update: 2022-12-23 17:11 GMT

ಮಡಿಕೇರಿ ಡಿ.23 : ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಸಾಕಾನೆಗಳಾದ ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ, ವಾಲಿ, ಲವ ಹಾಗೂ ಮಾರುತಿ ಹೆಸರಿನ ಸಾಕಾನೆಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಮಧ್ಯಪ್ರದೇಶದ ಹಿರಿಯ ಅರಣ್ಯಾಧಿಕಾರಿಗಳ ತಂಡ ಹಾಗೂ ವನ್ಯಜೀವಿ ತಜ್ಞರುಗಳು 5 ಲಾರಿಗಳಲ್ಲಿ ಆನೆಗಳನ್ನು ಕರೆದೊಯ್ದರು.

ಫೀ.ಮಾ.ಕಾರ್ಯಪ್ಪ ಆನೆ (8) ಜನರಲ್‍ತಿಮ್ಮಯ್ಯ (8), ವಾಲಿ (40) ಲವ (21) ಹಾಗೂ ಮಾರುತಿ (20) ಸಾಕಾನೆಗಳನ್ನು ಸ್ಥಳಾಂತರಿಸಲಾಗಿದ್ದು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರು ಮಧ್ಯಪ್ರದೇಶದ ಅಧಿಕಾರಿಗಳಿಗೆ ಸಾಕಾನೆಗಳ ದಾಖಲೆಗಳನ್ನು ಹಸ್ತಾಂತರಿಸಿದರು. 

ಜಿಲ್ಲೆಯ ವಿವಿಧೆಡೆ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಗೆ ಸರ್ಕಾರದಿಂದ ಅನುಮೋದನೆ ದೊರಕಿದೆ ಎಂದು ತಿಳಿಸಿದರು.

ಕೊಡಗು- ಮೈಸೂರು ಭಾಗದ ಸಾಕಾನೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಆನೆಗಳಿಗೆ ಇತರ ರಾಜ್ಯಗಳಿಂದ ಭಾರೀ ಬೇಡಿಕೆ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಸಾಕಾನೆಗಳಿಗಾಗಿ ಬೇಡಿಕೆ ಇಟ್ಟಿವೆ ಎಂದು ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ ಮೂರ್ತಿ ಹೇಳಿದರು.

ದುಬಾರೆಯಿಂದ ಸಾಕಾನೆಗಳನ್ನು ಬೀಳ್ಕೊಡುವ ಸಂದರ್ಭ ಎಸಿಎಫ್ ಎ.ಎ.ಗೋಪಾಲ, ವನ್ಯಜೀವಿ ತಜ್ಞ ಡಾ.ಚೆಟ್ಟಿಯಪ್ಪ, ಕುಶಾಲನಗರ ಅರಣ್ಯ ವಲಯಾಧಿಕಾರಿ ಕೆ.ವಿಶಿವರಾಮ್, ದುಬಾರೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡರಂಜನ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. 

Similar News