ಅಂಕೋಲಾ: ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

Update: 2022-12-24 06:23 GMT

ಅಂಕೋಲಾ: ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿ ಗ್ರಾಮದ ಬಳಿ‌ ಶನಿವಾರ ಸಂಭವಿಸಿದೆ.

ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಹೆದ್ದಾರಿಯಲ್ಲಿ ಆಗಮಿಸುತ್ತಿದ್ದ ವೇಳೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಲಾರಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಲಾರಿಯಲ್ಲಿ ರಾಸಾಯನಿಕ ವಸ್ತು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ.

ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. 

ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News