ಮೂಡಿಗೆರೆ | ಕಾಡಾನೆಗಳ ಬಗ್ಗೆ ಜನ ಜಾಗೃತಿಗೆ Digital Display ಬೋರ್ಡ್‍ಗಳ ಅಳವಡಿಕೆ: ಶಾಸಕ ಎಂ.ಪಿ.ಕುಮಾರಸ್ವಾಮಿ

Update: 2022-12-24 18:54 GMT

ಮೂಡಿಗೆರೆ, ಡಿ.24: ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಎಚ್ಚರಿಸುವ ಸಲುವ ಹಾಗೂ ಮುನ್ನೆಚ್ಚರಿಕೆಯಿಂದ ತಿರುಗಾಡುವಂತಾಗಲು ಕಾಡಂಚಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನಾಮಫಲಕಗಳನ್ನು ಅಳವಡಿಸುವ ಕೆಲಸಕ್ಕೆ ಶನಿವಾರ ಶಾಸಕ ಎಂ.ಪಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಪಟ್ಟಣದ ಹೊರವಲಯದ ಹ್ಯಾಂಡ್‍ಪೋಸ್ಟ್ ಸರ್ಕಲ್ ಬಳಿ ಅರಣ್ಯ ಇಲಾಖೆ ವತಿಯಿಂದ ಕಾಡಾನೆಯಿಂದ ಅವಘಡ ತಪ್ಪಿಸುವ ಉದ್ದೇಶದಿಂದ ಅಳವಡಿಸಿರುವ ಕಾಡಾನೆಗಳ ಬಗ್ಗೆ ಮಾಹಿತಿ ನೀಡುವ ಡಿಜಿಟಲ್ ಡಿಸ್‍ಪ್ಲೇ ಬೋರ್ಡ್‍ಗಳ (Digital Display) ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರದ ಆದೇಶದಂತೆ ಅರಣ್ಯ ಇಲಾಖೆ ಹರಸಾಹಸಪಟ್ಟು ಭೈರಾಪುರದಲ್ಲಿ ಭೈರ ಎಂಬ ಕಾಡಾನೆಯನ್ನು ಸೆರೆ ಹಿಡಿದಿದೆ. ತಾಲೂಕಿನ ಕುಂದೂರು ಭಾಗದಲ್ಲಿ 2  ಕಾಡಾನೆಗಳನ್ನು ಇಲಾಖೆ ಅಧಿಕಾರಿ, ಸಿಬ್ಬಂದಿ ಶ್ರಮವಹಿಸಿ ಸೆರೆ ಹಿಡಿದು ಸ್ಥಳಾಂತರ ಮಾಡಿದ್ದಾರೆ. ಇದರಿಂದ ಕಾಡಂಚಿನ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಭೈರಾಪುರದಲ್ಲಿ ಸೆರೆ ಹಿಡಿದ ಕಾಡಾನೆಯ ಬಗ್ಗೆ ಗೊಂದಲ ಮೂಡಿಸುವ ಮಾತನಾಡುತ್ತಿದ್ದಾರೆ. ಆದರೆ ಸೆರೆ ಸಿಕ್ಕ ಆನೆ ಭೈರ ಎಂಬುದು ದೃಢಪಟ್ಟಿದೆ. ಗೂನು ಬೆನ್ನು ಹೊಂದಿದ್ದ ಆನೆಯೇ ಭೈರ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ತಿರುಗಾಡುವಂತಾಗಲು ಹಾಗೂ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸುವ ಉದ್ದೇಶದಿಂದ ಕಾಡಾನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ನಿರ್ದಿಷ್ಟು ಪ್ರದೇಶಗಳಲ್ಲಿ ಡಿಜಿಟಲ್ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆ ವತಿಯಿಂದ ಡಿಜಿಟಲ್ ಡಿಸ್‍ಪ್ಲೇ ಬೋರ್ಡ್ ಅಳವಡಿಸುವ ಹಾಗೂ ಕಾಡಾನೆಗಳು ಕಂಡು ಬಂದಲ್ಲಿ ಶೀಘ್ರ  ಎಸ್‍ಎಂಎಸ್ ಕಳುಹಿಸುವಂತಹ ವಿನೂತನ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದ ಅವರು, ಡಿಸ್‍ಪ್ಲೇ ಬೋರ್ಡ್‍ಗಳಿಂದಾಗಿ ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ತಿರುಗಾಡಲು ಸಾಧ್ಯವಾಗಲಿದೆ ಎಂದರು.

ಡಿಸಿಎಫ್ ಕ್ರಾಂತಿ ಮಾತನಾಡಿ, ಕಾಡಾನೆ ಸಂಚರಿಸುವ ಬಗ್ಗೆ ಮಾಹಿತಿ ನೀಡಲು ಹ್ಯಾಂಡ್‍ಪೋಸ್ಟ್, ಬೈದುವಳ್ಳಿ, ಗೌಡಹಳ್ಳಿ, ಬೈರಾಪುರ, ಮೇಕನಗದ್ದೆ, ಗುತ್ತಿ, ಚೇಗು, ಗೋಣಿಬೀಡು, ಕುಂದೂರು, ಗಬ್ಗಲ್ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ಕಾಡಾನೆ ಇರುವ ಮಾಹಿತಿ ಬಗ್ಗೆ ಡಿಜಿಟಲ್ ಡಿಸ್‍ಪ್ಲೇ ಬೋರ್ಡ್ ಅಳವಡಿಸಲಾಗಿದೆ. ಸಂಜೆ 4ರಿಂದ ಬೆಳಗ್ಗೆ 10ರವರೆಗೆ ಈ ಬೋರ್ಡ್‍ಗಳು ಕಾರ್ಯನಿರ್ವಹಿಸುತ್ತವೆ. ಕಾಡಾನೆಗಳು ಕಂಡು ಬಂದರೆ 7204004261 ಸಂಖ್ಯೆಗೆ ಕರೆ ಮಾಡಿದರೆ ಕೂಡಲೇ ಇಟಿಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆ ಓಡಿಸುವ ಕ್ರಮ ಕೈಗೊಳ್ಳುತ್ತಾರೆಂದು ಮಾಹಿತಿ ನೀಡಿದರು. 

ಎಸಿಎಪ್ ರಾಜೇಶ್ ನಾಯಕ್, ಆರ್ ಎಫ್‍ಒ ಮೋಹನ್‍ಕುಮಾರ್, ಎಟಿಎಫ್‍ನ ಆರ್‍ಎಫ್‍ಒ ಸಿ.ರಂಗನಾಥ್ ಹಾಗೂ ಇಟಿಎಫ್ ಮತ್ತು ಅರಣ್ಯ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

Similar News