ಮೋದಿಯವರ ಯೋಜನೆ ಬಡವರ ಪರ ಎಂದಾದರೆ, ಸಿದ್ದರಾಮಯ್ಯರ 'ಅನ್ನಭಾಗ್ಯ' ಅದಾನಿ ಪರ ಇರುತ್ತದೆಯೇ?: ಡಾ.ಎಚ್.ಸಿ. ಮಹದೇವಪ್ಪ

Update: 2022-12-24 14:46 GMT

ಬೆಂಗಳೂರು, ಡಿ. 24: 'ಮೋದಿಯವರ ಆಹಾರ ಧಾನ್ಯ ವಿತರಣೆಯ ನಿರ್ಧಾರವು ಬಡವರ ಪರ ಎಂದ ಮೇಲೆ, ಸಿದ್ದರಾಮಯ್ಯನವರ 'ಅನ್ನಭಾಗ್ಯ'ವು ಅದಾನಿ ಪರ ಇರುತ್ತದೆಯೇ?' ಎಂದು  ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಯುಪಿಎ ಸರಕಾರ ಜಾರಿಗೊಳಿಸಿದ್ದ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ 1 ವರ್ಷ ಉಚಿತ ಪಡಿತರವನ್ನು ವಿತರಿಸಲು ಕೇಂದ್ರ ನಿರ್ಧರಿಸಿದ್ದು. ಇದನ್ನು ಬಡವರ ಬಗ್ಗೆ ಮೋದಿಯವರಿಗೆ ಎಂತಹ ಕಾಳಜಿ ಇದೆ ನೋಡಿ ಎಂದು ಬಿಜೆಪಿಗರು ಹೇಳಲು ಆರಂಭಿಸಿದ್ದಾರೆ. ಆದರೆ ಅನ್ನಭಾಗ್ಯ ಯೋಜನೆಯಡಿ ಪೂರ್ಣ 5 ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಆಹಾರ ಧಾನ್ಯಗಳನ್ನು ವಿತರಿಸುವ ಕೆಲಸ ಮಾಡಿದ ಸಂದರ್ಭದಲ್ಲಿ ಇದೇ ಬಿಜೆಪಿಗರು 'ಅನ್ನಭಾಗ್ಯ ಬಡವರನ್ನು ಸೋಮಾರಿಗೊಳಿಸುವ ಯೋಜನೆ' ಎಂದಿದ್ದರು ಎಂದು ಟೀಕಿಸಿದ್ದಾರೆ.

ಈ ಎರಡು ತಲೆ ಹಾವಿನಂತಹ ಬಿಜೆಪಿಗರಿಗೆ ಇನ್ನೇನು ಹೇಳುವುದು?, ಮುಖ್ಯವಾಗಿ ಹೇಳುವುದಾದರೆ ಆಹಾರ ಯೋಜನೆಗಳಿಂದ ಎಂದಿಗೂ ಆರ್ಥಿಕತೆ ನಷ್ಟವಾಗುವುದಿಲ್ಲ. ಉತ್ಪಾದನೆಯಲ್ಲಿ ತೊಡಗುತ್ತಲೇ ಬಂದಿರುವ ಬಡವರಿಗೆ ಆಹಾರ ದೊರೆತರೆ ಅವರ ದುಡಿಯುವ ಶಕ್ತಿ ಹೆಚ್ಚಾಗುತ್ತದೆ ಮತ್ತು ಅದು ಆರ್ಥಿಕತೆಯ ಮೇಲೆ ಆರೋಗ್ಯಕರ ಪರಿಣಾಮವನ್ನೇ ಬೀರುತ್ತದೆ ಎಂಬ ಅರ್ಥಶಾಸ್ತ್ರೀಯ ಜ್ಞಾನವನ್ನು ಅಸಮರ್ಪಕ ಶೀರ್ಷಿಕೆ ನೀಡುವ ಮಾಧ್ಯಮದ ಆದಿಯಾಗಿ ಎಲ್ಲರೂ ಹೊಂದಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇನ್ನು ಆಹಾರ ಯೋಜನೆಗಳನ್ನು  ಮೋದಿ ಅಥವಾ ಸಿದ್ದರಾಮಯ್ಯನವರ ಆದಿಯಾಗಿ ಯಾರೇ ಜಾರಿ ಮಾಡಿದರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕೇ ವಿನಃ ಅಸೂಯೆ ಪಡಬಾರದು ಅಥವಾ ಒಬ್ಬರು ಮಾಡಿದ್ದು ಸರಿ ಇನ್ನೊಬ್ಬರು ಮಾಡಿದ್ದು ಸರಿಯಲ್ಲ ಎಂಬ ಪೂರ್ವಾಗ್ರಹವನ್ನು ಹೊಂದಬಾರದು ಎಂದು ಡಾ. ಮಹದೇವಪ್ಪ ತಿಳಿಸಿದ್ದಾರೆ.

Similar News