ಶೃಂಗೇರಿ: ಕೆಇಬಿ ಕಚೇರಿಯಲ್ದಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನದ ಆರೋಪ; ದೂರು

Update: 2022-12-24 14:18 GMT

ಚಿಕ್ಕಮಗಳೂರು, ಡಿ.24: ಕೆಇಬಿ ಕಚೇರಿಯಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೊಡೆದು ಅಪಮಾನ ಮಾಡಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟದಲ್ಲಿ ಶುಕ್ರವಾರ ಸಂಜೆ ವರದಿಯಾಗಿದ್ದು, ಘಟನೆ ಸಂಬಂಧ ಬಿಎಸ್ಪಿ ಮುಖಂಡರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಟ್ಟಣದಲ್ಲಿರುವ ಕೆಇಬಿ ಕಚೇರಿಯಲ್ಲಿ ಅಧಿಕಾರಿಗಳು ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಿತ್ರವನ್ನು ಹಾಕಿದ್ದು, ಇದನ್ನು ಸಹಿಸದ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದು, ಶುಕ್ರವಾರ ಬೆಳಗ್ಗೆ ಕಚೇರಿ ಸಿಬ್ಬಂದಿ ಭಾವಚಿತ್ರವನ್ನು ಗಮನಿಸಿದಾಗ ಚಪ್ಪಲಿಯ ಗುರುತು ಇರುವುದು ಪತ್ತೆಯಾಗಿದೆ. ಈ ವಿಚಾರ ದಲಿತ ಸಂಘಟನೆಗಳ ಮುಖಂಡರಿಗೆ ತಿಳಿಯುತ್ತಿದ್ದಂತೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಪ್ಪಲಿ ಗುರುತನ್ನು ಖಚಿತಪಡಿಸಿಕೊಂಡು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿದ ಬಿಎಸ್ಪಿ ತಾಲೂಕು ಅಧ್ಯಕ್ಷೆ ಶೀಲಾ ಹಾಗೂ ದಲಿತ ಸಂಘಟನೆಗಳ ಮುಖಂಡ ಗೋಪಾಲ್ ಮತ್ತಿತರರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದೂರು ನೀಡಿದ್ದಾರೆ. ನಂತರ ದಲಿತ ಮುಖಂಡರು ಭಾವವಿತ್ರವನ್ನು ಸ್ವಚ್ಛಗೊಳಿಸಿ ಹೂವಿನ ಹಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳ ಬಗ್ಗೆ ಪೊಲೀಸರು ಶೀಘ್ರ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಇದೇ ವೇಳೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Similar News