ಈ ವಾರ

Update: 2022-12-25 07:32 GMT

‘ಸಾವರ್ಕರ್’ ತಂತ್ರ

ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸರಕಾರ ಸಾವರ್ಕರ್ ಫೋಟೊ ಅನಾವರಣ ಮಾಡಿದೆ. ಜೊತೆಗೆ ಗಾಂಧಿ, ಅಂಬೇಡ್ಕರ್, ನೇತಾಜಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಸ್ವಾಮಿ ವಿವೇಕಾನಂದ, ಬಸವಣ್ಣನವರ ಫೋಟೊಗಳನ್ನೂ ಅನಾವರಣ ಮಾಡಲಾಗಿದೆ.

ಬಿಜೆಪಿ ಯಾವಾಗಲೂ ಮುಖ್ಯ ವಿಷಯಗಳು ಚರ್ಚೆಯಾಗದಂತೆ ನೋಡಿಕೊಳ್ಳಲು ವಿಷಯಾಂತರ ತಂತ್ರವನ್ನು ಅನುಸರಿಸುತ್ತದೆ. ರಾಷ್ಟ್ರಮಟ್ಟದಲ್ಲಿದ್ದ ಚಾಳಿಯನ್ನು ರಾಜ್ಯದಲ್ಲಿನ ಬಿಜೆಪಿ ಸರಕಾರವೂ ಮಾಡುತ್ತಿದೆ. ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ಹಲವು ವಿಚಾರಗಳಿದ್ದವು. ಅಂತಹ ಹೊತ್ತಲ್ಲೇ ಸರಕಾರ ವಿಧಾನಸಭೆಯೊಳಗೆ ಸಾವರ್ಕರ್ ಫೋಟೊ ಅನಾವರಣಕ್ಕೆ ಮುಂದಾಯಿತು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎನ್ನುವವರು ಅವರ ಭಾವಚಿತ್ರವನ್ನು ವಿಧಾನಸಭೆಯೊಳಗೆ ಅನಾವರಣಗೊಳಿಸುವಾಗ ಮಾಧ್ಯಮದವರನ್ನು ಯಾಕೆ ನಿರ್ಬಂಧಿಸಬೇಕಾಗಿ ಬಂತೋ ಗೊತ್ತಾಗುತ್ತಿಲ್ಲ.

ಅಧಿಕಾರಕ್ಕೆ ಬಂದ ಲಾಗಾಯ್ತಿನಿಂದ ಇತಿಹಾಸವನ್ನು ತಿರುಚಿ ಹೇಳಲು ಸ್ಮಾರಕ, ಜಾಹೀರಾತು, ಪಠ್ಯಪುಸ್ತಕ ಹೀಗೆ ಸಿಗುವ ಎಲ್ಲವನ್ನೂ ಬಳಸಿಕೊಳ್ಳುತ್ತಿರುವ ಬಿಜೆಪಿ, ಅದರ ಮತ್ತೊಂದು ಭಾಗವಾಗಿ ಸಾವರ್ಕರ್ ಫೋಟೊವನ್ನು ವಿಧಾನಸಭೆಯೊಳಗೆ ತಂದಿತು. ಆದರೆ, ಅದಕ್ಕಿಂತ ಹೆಚ್ಚಾಗಿ ಇಲ್ಲಿ ಅದು ಸಾವರ್ಕರ್ ಫೋಟೊ ಬಳಸಿಕೊಳ್ಳಲು ಮುಂದಾದದ್ದು ಬೇಕೆಂದೇ ಕಾಂಗ್ರೆಸನ್ನ್ನು ಕೆಣಕಿ, ಚರ್ಚೆಯಾಗಬೇಕಾದ ವಿಚಾರಗಳು ಹಿನ್ನೆಲೆಗೆ ಸರಿಯುವಂತೆ ಮಾಡುವ ತಂತ್ರವಾಗಿತ್ತೇ ಎಂಬ ಅನುಮಾನ ಕೂಡ ಕಾಡುತ್ತದೆ.

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ, ಚಿಲುಮೆ ವೋಟರ್ ಐಡಿ ಹಗರಣ, 40 ಪರ್ಸೆಂಟ್ ಕಮಿಷನ್, ರೈತರ ಸಮಸ್ಯೆ, ವಿದ್ಯಾರ್ಥಿ ವೇತನ ರದ್ದು ಮೊದಲಾದ ವಿಷಯಗಳು ಚರ್ಚೆಯಾಗುವುದನ್ನು ತಪ್ಪಿಸಲೆಂದೇ ಸಾವರ್ಕರ್ ಫೋಟೊವನ್ನು ಸರಕಾರ ತಂದಿದ್ದಿರಬೇಕು. ಆದರೆ, ಕಾಂಗ್ರೆಸ್ ಜಾಣ ಹೆಜ್ಜೆ ಇಟ್ಟಿತು. ಆ ವಿಚಾರದ ಬಗ್ಗೆ ತನ್ನ ತಾತ್ವಿಕ ಪ್ರತಿಭಟನೆ ದಾಖಲಿಸಿತು ಮಾತ್ರವಲ್ಲದೆ, ಸರಕಾರದ ತಂತ್ರವೇನೆಂಬುದನ್ನೂ ಬಯಲು ಮಾಡಿತು.

ಅಧಿಕಾರವಷ್ಟೇ ಬೇಕು

ಸಚಿವ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಂಡಿದ್ದ ಶಾಸಕ ಕೆ.ಎಸ್.ಈಶ್ವರಪ್ಪಮತ್ತು ರಮೇಶ್ ಜಾರಕಿಹೊಳಿ ಚಳಿಗಾಲದ ಅಧಿವೇಶನಕ್ಕೇ ಹಾಜರಾಗಿರಲಿಲ್ಲ. ಸ್ಪೀಕರ್ ನೊಟೀಸ್ ಬಳಿಕ ಹಾಜರಾಗಿದ್ದಾರೆ. ಈಶ್ವರಪ್ಪಕಾಲುನೋವಿನ ಕಾರಣ ಹೇಳಿದ್ದಾರೆ.

ಶಾಸಕರಾದವರ ಜವಾಬ್ದಾರಿ ಏನೆಂಬುದಕ್ಕಿಂತ ಹೆಚ್ಚಾಗಿ ಅಧಿಕಾರ ಮಾತ್ರ ಶಾಸಕರಿಗೆ ಮುಖ್ಯವಾಗುತ್ತಿದೆಯೇ? ಸಚಿವ ಸ್ಥಾನ ಸಿಗದೆ ಸದನಕ್ಕೆ ಹೋಗುವುದಿಲ್ಲ ಎಂದು ಈಶ್ವರಪ್ಪ ಬಹಿರಂಗವಾಗಿಯೇ ಹೇಳಿದ್ದರು. ಅದನ್ನು ಸೌಜನ್ಯದ ಪ್ರತಿಭಟನೆ ಎಂದೂ ಕರೆದುಕೊಂಡಿದ್ದರು. ಇವರಿಗೆ ಜನರ ಕಷ್ಟ, ಅವರ ಸಮಸ್ಯೆಗಳು ಮುಖ್ಯವಾಗುವುದೇ ಇಲ್ಲ.

ಆದರೆ ಮಂತ್ರಿಗಿರಿ ಮಾತ್ರ ಅತ್ಯವಶ್ಯವಾಗಿ ಬೇಕು. ಶಾಸಕನನ್ನಾಗಿ ಜನರು ತನ್ನನ್ನು ಆರಿಸಿ ಕಳಿಸಿರುವಾಗ ಅವರಿಗೆ ಉತ್ತರದಾಯಿಯಾಗಿರಬೇಕು ಎಂಬ ಸಜ್ಜನಿಕೆ ಇಲ್ಲದವರಿಗೆ, ಅಧಿವೇಶನದಂತಹ ಸಂದರ್ಭದಲ್ಲಿ ಸದನದಲ್ಲಿ ಇರದಿರುವ ನಡೆಯನ್ನು ಸೌಜನ್ಯದ ಪ್ರತಿಭಟನೆ ಎಂದು ಹೇಳಿಕೊಳ್ಳುವುದಕ್ಕೆ ಯಾವ ನೈತಿಕತೆ ಇದೆ? ಸೌಜನ್ಯದ ಪ್ರತಿಭಟನೆಯನ್ನು ಜನಪರವಾದ ವಿಚಾರಕ್ಕೆ ಮಾಡಬೇಕೇ ಹೊರತು ಮಂತ್ರಿಗಿರಿಗಾಗಿ ಅಲ್ಲವೆಂಬುದು ಈ ಅಧಿಕಾರದಾಹಿಗಳಿಗೆ ಹೇಗೆ ಗೊತ್ತಾಗಬೇಕು? ಕಡೆಗೂ ಇವರೆಲ್ಲ ದನಿಯೆತ್ತುವುದು ಅಧಿಕಾರ ಸಿಗಬೇಕೆಂದು ಮಾತ್ರವೇ ಹೊರತು, ಜನರ ಒಳಿತಿಗಾಗಿ ಅಲ್ಲವೆಂಬುದು ಮತ್ತೊಮ್ಮೆ ಸಾಬೀತಾದಂತಾಯಿತು.

‘ಹಸಿವು’ ಇಲ್ಲವಂತೆ!

2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟವಾಗಿದ್ದು, ಭಾರತವು ಪಾಕ್, ಬಾಂಗ್ಲಾಕ್ಕಿಂತಲೂ ಕೆಳಗಿನ ಶ್ರೇಣಿಯಲ್ಲಿದೆ. ನೇಪಾಳ, ಶ್ರೀಲಂಕಾ ಕೂಡ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇ.19.3ರಷ್ಟಿದ್ದು, ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ವರದಿ ಹೇಳಿದೆ.

ಈ ದೇಶದಲ್ಲಿ ಶ್ರೀಮಂತರು ಅತಿ ಶ್ರೀಮಂತರಾಗುತ್ತಲೇ ಇರುವಾಗ, ಹಸಿದವರ ಪಾಡು ಇನ್ನಷ್ಟು ಶೋಚನೀಯವಾಗುತ್ತಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸತತವಾಗಿ ಹಸಿವು ಸೂಚ್ಯಂಕದಲ್ಲಿ ದೇಶ ಕುಸಿಯುತ್ತಿರುವುದರ ಬಗ್ಗೆ ಪ್ರತಿಪಕ್ಷಗಳು ಕಟುವಾಗಿಯೇ ಮಾತನಾಡುತ್ತಿವೆ. ಕತ್ತಲ ಯುಗಕ್ಕೆ ದೇಶವನ್ನು ತಂದಿರುವುದರ ಜವಾಬ್ದಾರಿಯನ್ನು ಸರಕಾರವೇ ಹೊರಬೇಕು ಎಂದು ಸಿಪಿಐ(ಎಂ) ಹೇಳಿದೆ. ಕಾಂಗ್ರೆಸ್ ಕೂಡ, 22 ಕೋಟಿಗೂ ಹೆಚ್ಚು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಈ ಸಮಸ್ಯೆಗೆ ಪರಿಹಾರ ಯಾವಾಗ ಎಂದು ಕೇಳಿದೆ.

ಸತ್ಯವನ್ನು ಅರಗಿಸಿಕೊಳ್ಳಲಾಗದ ಸರಕಾರ ಮಾತ್ರ ಸಮೀಕ್ಷೆಯೇ ತಪ್ಪುಎಂದಿದೆ. ಮೋದಿ ಸರಕಾರ ತನಗೆ ಪೂರಕ ಇರುವ ಯಾವುದೇ ವಿದೇಶಿ ಅಂಕಿ ಅಂಶಗಳನ್ನು, ಮಾಹಿತಿಗಳನ್ನು ಅವು ನಂಬಲರ್ಹ ಮೂಲಗಳಿಂದ ಇದೆಯೇ ಎಂಬುದನ್ನೂ ನೋಡದೆ ಕೂಡಲೇ ಸ್ವೀಕರಿಸುತ್ತದೆ. ಪ್ರಧಾನಿ ಮೋದಿಗೆ ಫಿಲಿಪ್ ಕೊಟ್ಲರ್ ಪ್ರಶಸ್ತಿ ಕೊಟ್ಟ ಸಂಸ್ಥೆ ಯಾವುದು ಎಂಬುದೇ ಸ್ಪಷ್ಟವಿಲ್ಲ. ಅದನ್ನು ಸ್ವೀಕರಿಸಿ ಕೊಂಡಾಡಲಾಗುತ್ತದೆ. ಆದರೆ ಬಡತನ, ಆರ್ಥಿಕ ಸ್ಥಿತಿಗತಿ, ಮಾನವ ಹಕ್ಕು, ಪತ್ರಿಕಾ ಸ್ವಾತಂತ್ರ್ಯಗಳ ಕುರಿತ ಜಾಗತಿಕ ಮಾನ್ಯತೆ ಇರುವ ಸಂಸ್ಥೆಗಳ ವರದಿಗಳನ್ನು ಸರಿ ಇಲ್ಲ ಎನ್ನಲಾಗುತ್ತದೆ.

 ಮತ್ತೆ ಕೊರೋನ

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಭಾರೀ ಏರಿಕೆ ಕಂಡುಬರುತ್ತಿದ್ದಂತೆ ಭಾರತದಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ಎಲ್ಲ ಬಗೆಯ ಮುಂಜಾಗ್ರತೆಗೆ ಸೂಚಿಸಲಾಗಿದೆ. ಕರ್ನಾಟಕದಲ್ಲಿಯೂ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ ಎಂದು ಸರಕಾರ ಹೇಳಿದೆ. ಜನಸಾಮಾನ್ಯರು ಮತ್ತೊಂದು ಆತಂಕದ ಸುಳಿಗೆ ಸಿಲುಕುವಂತಾಗಿದೆ.

ಕೊರೋನ ಪರಿಣಾಮವಾಗಿ ದೊಡ್ಡ ಮಟ್ಟದ ಆರ್ಥಿಕ ಹೊರೆಗೆ ಹೆಗಲು ಕೊಡಬೇಕಾಗಿ ಬಂದಿದ್ದ ಜನರಿಗೆ ಇದೀಗ ಮತ್ತೊಮ್ಮೆ ಅಂಥದೇ ಕಷ್ಟ ಎದುರಾಗಲಿರುವ ಹಾಗೆ ಕಾಣಿಸುತ್ತಿದೆ. ಕಳೆದ ಕೋವಿಡ್ ಸಮಯದಲ್ಲಿ ಹುಟ್ಟಿಕೊಂಡಂತೆ ಬಡ ಮತ್ತು ಅಸಹಾಯಕ ರೋಗಿಗಳನ್ನು ಅಕ್ಷರಶಃ ದರೋಡೆ ಮಾಡುವ, ಎಲ್ಲ ನಿಟ್ಟಿನಿಂದಲೂ ದುಡ್ಡು ಮಾಡಿಕೊಳ್ಳಲು ನೋಡುವ ಮತ್ತಷ್ಟು ಅಮಾನವೀಯ ನಡೆಗಳು ಈ ಬಾರಿಯೂ ಕಾಡಲಿವೆಯೇ? ಸರಕಾರದ ಬೇಜಾವಾಬ್ದಾರಿಯುತ, ಅವೈಜ್ಞಾನಿಕ, ರಾಜಕೀಯ ಪ್ರೇರಿತ ಕ್ರಮಗಳಿಂದ ಜನ ಹೆಚ್ಚು ಹೈರಾಣಾಗಿದ್ದರು. ಈಗಲೂ ಹಾಗೆಯೇ ಆಗುವಂತಿದೆ.

ದಾಖಲೆಗಳ ಆಟ

ಖತರ್‌ನಲ್ಲಿ ನಡೆದ 2022ರ ಫಿಫಾ ಫುಟ್ಬಾಲ್ ಫುಟ್ಬಾಲ್ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಸೋತು, ಅರ್ಜೆಂಟಿನ ಗೆದ್ದಿದ್ದು, ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಕನಸು ನನಸಾದದ್ದು ಒಂದು ಅಧ್ಯಾಯವಾದರೆ, ಪಂದ್ಯದ ಫೈನಲ್ ಸಮಯದಲ್ಲಿ 25 ವರ್ಷಗಳಲ್ಲೇ ಅತ್ಯಧಿಕ ಗೂಗಲ್ ಸರ್ಚ್ ನಡೆಯಿತೆಂಬುದು ಮತ್ತೊಂದು ವಿಶೇಷ.

ಇತ್ತೀಚಿನ ದಶಕಗಳಲ್ಲೇ ಇಂತಹದೊಂದು ರೋಚಕ ಫೈನಲ್ ನಡೆದಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಮೆಸ್ಸಿ ವಿಶ್ವಕಪ್ ಹಿಡಿದ ಫೋಟೋ ಇನ್ಸ್ಟಾಗ್ರಾಂನಲ್ಲಿ ಸಾರ್ವಕಾಲಿಕ ದಾಖಲೆ ಲೈಕ್ ಪಡೆದಿದೆ. ಇಂತಹ ಮೆಸ್ಸಿ ಪಡೆಯನ್ನು ಸೌದಿ ಅರೇಬಿಯ ಸೋಲಿಸಿದ್ದು, ಆಫ್ರಿಕಾದ ಮೊರಕ್ಕೊ ದೇಶ ಬಲಾಢ್ಯ ತಂಡಗಳನ್ನು ಸೋಲಿಸಿ ಇದೇ ಮೊದಲ ಬಾರಿ ಸೆಮಿ ಫೈನಲ್ ತಲುಪಿದ್ದು ಗಮನ ಸೆಳೆಯಿತು.

ನೂರು ವರ್ಷಗಳ ಇತಿಹಾಸದಲ್ಲೇ ಒಂದೇ ನಗರದಲ್ಲಿ ಹಲವು ಕ್ರೀಡಾಂಗಣಗಳಲ್ಲಿ ಆಡಲಾದ ಹಾಗೂ ಈವರೆಗಿನ ಅತ್ಯಂತ ದುಬಾರಿ ವಿಶ್ವಕಪ್ ಟೂರ್ನಿ ಇದಾಗಿತ್ತು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಜಾಗತಿಕ ಕೂಟದ ಮೂಲಕ ಖತರ್ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.