×
Ad

ಶಿಕ್ಷಣ ಸಚಿವರಿಗೆ ಕಲಿಕೆಯ ಸ್ವರೂಪದ ಬಗ್ಗೆ ತಿಳುವಳಿಕೆಯ ಕೊರತೆಯಿದೆ: ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ

Update: 2022-12-25 18:19 IST

ಬೆಂಗಳೂರು.ಡಿ.25: ತುಮಕೂರಿನ ಸಮಾವೇಶವೊಂದರಲ್ಲಿ ಶಿಕ್ಷಣ ಸಚಿವರು ಬಿ. ಸಿ ನಾಗೇಶ್ ರವರು ಸ ಮಾತನಾಡುತ್ತಾ 5 ಮತ್ತು 8ನೇ ತರಗತಿಗಳಿಗೆ ನಡೆಸುತ್ತಿರುವ ಪರೀಕ್ಷೆಗಳನ್ನು ಸಮರ್ಥಿಸಿಕೊಂಡಿದ್ದು, ಇದು ಅವೈಜ್ಞಾನಿಕ  ಹಾಗು ಮಕ್ಕಳ ವಿರೋಧಿ ತೀರ್ಮಾನವಾಗಿದೆ. ಶಿಕ್ಷಣ ಸಚಿವರಿಗೆ ಕಲಿಕೆಯ ಸ್ವರೂಪದ ಬಗ್ಗೆ ತಿಳುವಳಿಕೆಯ ಕೊರತೆಯಿದೆ ಎಂದು ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಇದು  ಪಬ್ಲಿಕ್ ಪರೀಕ್ಷೆಯಲ್ಲ ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡುವುದಷ್ಟೇ ಎಂದು ಹೇಳಿದ್ದಾರೆ . ಸ್ವತಃ ಸಚಿವರೇ ಮೌಲ್ಯಮಾಪನದ ಬಗ್ಗೆ  ಸರಿಯಾಗಿ ಅರ್ಥಮಾಡಿಕೊಳ್ಳದೆ ತಮ್ಮ ಅವೈಜ್ಞಾನಿಕ  ಹಾಗು ಮಕ್ಕಳ ವಿರೋಧಿ ತೀರ್ಮಾನವನ್ನು  ಸಮರ್ಥಿಸಿಕೊಳ್ಳುವ ಭರದಲ್ಲಿ ಬೇರೆಯವರನ್ನು ದೂಷಿಸುವ  ಮತ್ತು ತಪ್ಪು ಸಂದೇಶ ಸಾರುವ ಕೆಲಸದಲ್ಲಿ ತೊಡಗಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಕೇಂದ್ರೀಕೃತ  ಪ್ರಶ್ನೆ ಪತ್ರಿಕೆಯನ್ನು ಆಧರಿಸಿ  ಮಾಡುವ ಯಾವುದೇ ಪರೀಕ್ಷೆ ಅದು ಸಾರ್ವಜನಿಕ ಪರೀಕ್ಷೆ ಅಥವಾ ಸಾರ್ವರ್ತ್ರಿಕ ಪರೀಕ್ಷೆಯಾಗಿರುತ್ತದೆ. ಪ್ರತೀ ಶಾಲೆಯಲ್ಲಿ ಮಕ್ಕಳ ಕಲಿಕೆಯೆಂಬುದು  ನಿರಂತರ ಮತ್ತು ವಿಭಿನ್ನವಾಗಿದ್ದಾಗ ,  ಕೇಂದ್ರೀಕೃತ  ಪ್ರಶ್ನೆ ಪತ್ರಿಕೆಯನ್ನು  ಆಧರಿಸಿ ಮಾಡುವ ಯಾವುದೇ ಪರೀಕ್ಷೆಯು ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡಲು ಸಹಾಯವಾಗುವುದಿಲ್ಲ. ಅದೊಂದು ನಿರರ್ಥಕ ಪರಿಣಾಮಕಾರಿಯಲ್ಲದ ಕ್ರಿಯೆಯಾಗುತ್ತದೆ. ಸಮಯ ಹಾಗು ಸಂಪನ್ಮೂಲಗಳ ವ್ಯಯವಾಗುವುದರ ಜೊತೆಗೆ , ಮಕ್ಕಳಲ್ಲಿ ಭಯ , ಆತಂಕ ಮತ್ತು ಕೀಳಿರಿಮೆಯನ್ನು ಹುಟ್ಟು ಹಾಕುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಮಕ್ಕಳ ಕಲಿಕೆಯಾಗಿಲ್ಲ ಆದ್ದರಿಂದ ಅವರು ಶಾಲೆ ಬಿಡುತ್ತಿದ್ದಾರೆ ಹೀಗಾಗಿ ಮೂರು ಗಂಟೆಗಳ ಪರೀಕ್ಷೆ ಮಾಡಿ ಆತ್ಮಸ್ಥೈರ್ಯ ತುಂಬುತ್ತೇವೆ ಎಂಬುದು ಕಲಿಕೆಯ ಬಗ್ಗೆ ನಮಗಿರುವ ತಿಳುವಳಿಕೆಯ ಕೊರತೆಯನ್ನು ಸೂಚಿಸುತ್ತದೆ. ಕಲಿಕೆಯಾಗಿಲ್ಲವೆಂದರೆ ಕಲಿಕೆಯನ್ನು ಗಟ್ಟಿಗೊಳಿಸುವ ಮತ್ತು ಮತ್ತಷ್ಟು ಅರ್ಥಪೂರ್ಣಗೊಳಿಸುವ ಕೆಲಸವಾಗಬೇಕೆ ಹೊರತು ಸನಾತನ ಮಾದರಿಯ ಪರೀಕ್ಷೆ ಹೆಚ್ಚು ಪ್ರಯೋಜನವಾಗುವುದಿಲ್ಲ ಎಂದರು. 

ಈ ಕಾರಣದಿಂದಲೇ, ಮಕ್ಕಳ ಕಲಿಕೆಯನ್ನು ವರ್ಷಕ್ಕೊಮ್ಮೆ ಅಳೆದು ಅವರನ್ನು ದೂಷಿಸುವ ಬದಲು ಮಕ್ಕಳ ಕಲಿಕೆಯನ್ನು ನಿರಂತರವಾಗಿ ಮತ್ತು ವಿಸ್ತೃತವಾಗಿ ಮೌಲ್ಯಮಾಪನ ಮಾಡುತ್ತಾ ಮಕ್ಕಳು ಕಲಿಕೆಯಲ್ಲಿ ಎಲ್ಲಿದ್ದಾರೆ ಎಂದು ದಿನ ನಿತ್ಯ ತಿಳಿದು ಅದರ ಆಧಾರದಲ್ಲಿ ಕಲಿಕೆಯನ್ನು ಸಂಘಟಿಸಿ ಹಾಗು ಸಂಯೋಜಿಸಿ ಎಲ್ಲಾ ಮಕ್ಕಳು ಪ್ರಭುತ್ವದ ಮಟ್ಟಕ್ಕೆ ಕಲಿಯಬೇಕೆಂಬ ಉದಾತ್ತ ಆಶಯದಿಂದಲೇ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೆ ತಂದು ಸಮಗ್ರ ಹಾಗು ನಿರಂತರ ಮೌಲ್ಯಮಾಪನವನ್ನು ಜಾರಿಗೊಳಿಸಿದ್ದು . ಸಚಿವರು ದಯಮಾಡಿ, ಶಿಕ್ಷಣ  ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದರು.

ಕಲಿಕಾ ಅಂಶಗಳನ್ನು ಕಲಿಸುವ ಮೂಲಕ ಸಾಧಿಸಬೇಕಾದ ಸಾಮರ್ಥ್ಯಗಳನ್ನು ಒಂದು ನಿರ್ದಿಷ್ಟವಾದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿ ಕಲಿತು ಸೂಕ್ತ ಸಾಧನ ತಂತ್ರಗಳನ್ನು ಬಳಸಿ ಮೌಲ್ಯಮಾಪನ ಮಾಡಬೇಕಿರುತ್ತದೆ. ಅದಕ್ಕೆ ಅತ್ಯಂತ ಸೂಕ್ತವಾದ ವಿಧಾನ ಸಮಗ್ರ ಹಾಗು ನಿರಂತರ ಮೌಲ್ಯಮಾಪನ ಮತ್ತು ಅದನ್ನು ಮಾಡಬೇಕಾದವರು ಆ ಶಾಲೆಯಲ್ಲಿ ಕಲಿಸುವ ಶಿಕ್ಷಕರು.  ಕಲಿಕೆಯನ್ನು ಅಥವಾ ಕಲಿಕಾ ಸಾಮರ್ಥ್ಯಗಳನ್ನು  ಕೇವಲ ಕೆಲವು ಗಂಟೆಗಳಲ್ಲಿ ಮೌಲ್ಯಮಾಪನ ಮಾಡುವುದು ಎಂತಹಾ ವೈಜ್ಞಾನಿಕ ಕ್ರಮ  ಎಂದು ಸಚಿವರು ಅರಿಯಬೇಕಿದೆ ಎಂದಿದ್ದಾರೆ.

ನಮಗೆ ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡುವ ಅಗತ್ಯವಿದ್ದರೆ , ಈಗಾಗಲೇ ಶಿಕ್ಷಕರು ಮಕ್ಕಳು ಕಲಿಯುವ ಪ್ರತಿಯೊಂದು ವಿಷಯದಲ್ಲಿ ನಾಲ್ಕು ರೂಪಣಾತ್ಮಕ ಹಾಗು ಒಂದು ಸಂಕಲನಾತ್ಮಕ ಪರೀಕ್ಷೆಯನ್ನು ನಡೆಸಿ ಅದರ ವಿವರಗಳನ್ನು ಶಾಲಾವಹಿಗಳಲ್ಲಿ ಮತ್ತು ವಿದ್ಯಾರ್ಥಿ  ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯಲ್ಲಿ ಅಪ್ಲೋಡ್  ಮಾಡಿದ್ದಾರೆ . ಮಕ್ಕಳು ಎಲ್ಲಿದ್ದಾರೆ ಎಂದು ಗುರುತಿಸಲು ಇಷ್ಟು ದೊಡ್ಡ ಮಟ್ಟದ ದತ್ತಾಂಶ ನಮ್ಮ ಬಳಿ ಇರುವಾಗ ಮತ್ತೊಂದು ಪರೀಕ್ಷೆಯ ಅಗತ್ಯ ಏನು ಮತ್ತು ಅದರ ಹಿಂದಿರುವ ರಹಸ್ಯವೇನು ಎಂಬುದನ್ನು ಸಚಿವರು ಸಾರ್ವಜನಿಕವಾಗಿ ಹೇಳಬೇಕಿದೆ ಎಂದು ಆಗ್ರಹಿಸಿದ್ದಾರೆ. 

ಕೇಂದ್ರೀಕೃತ ಪರೀಕ್ಷೆಗಳನ್ನು ಮಾಡಿ ಮಕ್ಕಳನ್ನು 'ಫೇಲ್' ಎಂದು ಘೋಷಿಸದಿದ್ದರೂ, ಮಕ್ಕಳನ್ನು  ಗ್ರೇಡ್  ಆಧಾರದಲ್ಲಿ ಘೋಷಿಸುವುದು ಅಥವಾ ಬಹಿರಂಗವಾಗಿ ಕಳಪೆ ಅಂಕಗಳನ್ನು ಪಡೆದ ಮಕ್ಕಳೆಂದು ವರ್ಗೀಕರಿಸುವುದರಿಂದ ಮಕ್ಕಳು ಶಾಲೆಯನ್ನು ತೊರೆಯುವ ಅವಕಾಶವನ್ನು ಹೆಚ್ಚಿಸುತ್ತದೆ. ಮಕ್ಕಳ ಕಲಿಕೆ, ಕಲಿಕೆಗೆ ನಾವು ಒದಗಿಸುವ ವಾತಾವರಣ, ಶಿಕ್ಷಕರ ಸಾಮರ್ಥ್ಯ , ಶಿಕ್ಷಕರು ಪೂರ್ಣವಾಗಿ ಕಲಿಸಲು ಸಾಧ್ಯವಾಗುವ ಪರಿಸರ ಮತ್ತು ಅವಕಾಶ , ಮಕ್ಕಳ ಮನಸ್ಸನ್ನು ಅರಿತು ಸಂವೇದನಾಶೀಲತೆಯಿಂದ ಕಲಿಸುವ ಮನೋಧರ್ಮ, ಇತ್ಯಾದಿಗಳನ್ನು ಅವಲಂಬಿಸುತ್ತದೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು, ಅಂದರೆ,  2019-20 ರಲ್ಲಿ 22,200 (ಶೇಕಡ.8.46); 2020-21 ರಲ್ಲಿ 34,079 (ಶೇಕಡ.14.62) ; ಮತ್ತು 2021-22 ರಲ್ಲಿ 1,41,358 (ಶೇಕಡ.57.57), ಮಕ್ಕಳು ಕಲಿಕೆ ಎಲ್ಲಿದೆ ಎಂದು ಪರೀಕ್ಷಿಸಲು ಇರುವ ನೈತಿಕತೆಯಾದರು ಏನು ಎಂದು ಪ್ರಶ್ನಿಸಿದರು.  

ಮಾನ್ಯ ಸಚಿವರು, ಈಗಲಾದರು ಈ ಎಲ್ಲಾ ಅಂಶಗಳನ್ನು ಅರಿತು 5 ಮತ್ತು 8 ನೇ ತರಗತಿಯ  ಉದ್ದೇಶಿತ ಕೇಂದ್ರೀಕೃತ  ಪರೀಕ್ಷೆಯನ್ನು ಮಕ್ಕಳ ಹಿತದೃಷ್ಟಿಯಿಂದ  ಕೈ ಬಿಡಬೇಕೆಂದು ನಮ್ರವಾಗಿ ವಿನಂತಿಸುತ್ತೇನೆ ಮತ್ತು ಇದು ಪ್ರತಿಷ್ಟೆಯ ಪ್ರಶ್ನೆಯಲ್ಲ, ಬದಲಿಗೆ ಮಕ್ಕಳಿಗೆ ಕಲಿಕಾ ಸ್ನೇಹಿ ವಾತಾವರಣದಲ್ಲಿ ವೈಜ್ಞಾನಿಕವಾಗಿ ಕಲಿಸುವ ಪ್ರಶ್ನೆಯಾಗಿದೆ ಎಂದಿದ್ದಾರೆ. 

Similar News