ನಾಡದೋಣಿ ಮೀನುಗಾರಿಕೆಗೆ ಸೀಮೆಎಣ್ಣೆ ಒದಗಿಸಲು ಸಾಧ್ಯವಾಗದಿದ್ದರೆ ಅಧಿಕಾರ ತ್ಯಜಿಸಿ: ಸಿದ್ದರಾಮಯ್ಯ

Update: 2022-12-26 12:07 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 26: ‘ನಾಡದೋಣಿ ಮೀನುಗಾರಿಕೆ ಪರವಾನಗಿದಾರರಿಗೆ ಸಕಾಲಕ್ಕೆ ಅಗತ್ಯವಿರುವಷ್ಟು ಸೀಮೆಎಣ್ಣೆ ಒದಗಿಸಲು ಸಾಧ್ಯವಾಗದಿದ್ದರೆ ಅಧಿಕಾರ ತ್ಯಜಿಸಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ಛಾಟಿ ಬೀಸಿದ್ದಾರೆ.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸುಕುಮಾರ ಶೆಟ್ಟಿ ಪರವಾಗಿ ಸಂಜೀವ್ ಮಠಂದೂರು ಕೇಳಿದ ಪ್ರಶ್ನೆಗೆ ಮೀನುಗಾರಿಕೆ ಸಚಿವ ಎಸ್.ಅಂಗಾರ ನೀಡಿದ ಉತ್ತರದಿಂದ ಅಸಮಾಧಾನಗೊಂಡ ಅವರು, ‘ಸಚಿವರ ಉತ್ತರ ನೀರಿನ ಮೇಲಿನ ಗುಳ್ಳೆಯಂತಿದೆ. ಮೀನುಗಾರಿಕೆಗೆ ಮಾಸಿಕ ಅಗತ್ಯವಿರುವ ಸೀಮೆಎಣ್ಣೆ ಒದಗಿಸದೆ ಹೋದರೆ ಹೇಗೇ?’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾಸಿಕ ತಲಾ 300 ಲೀಟರ್ ಸೀಮೆಎಣ್ಣೆ ನೀಡಬೇಕು ಎಂಬ ನಿಯಮವಿದೆ. ಆದರೆ, ಹತ್ತು ತಿಂಗಳಿಂದ ಸರಿಯಾಗಿ ಸೀಮೆಎಣ್ಣೆ ಪೂರೈಕೆಯಾಗಿಲ್ಲ. ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ. ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಉತ್ತರಿಸಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಹೀಗಾದರೆ ಅವರು ಜೀವನ ನಡೆಸುವುದು ಹೇಗೆ?’ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

‘ಕೇಂದ್ರ ಸರಕಾರದಿಂದ 5,472 ಕಿಲೋ ಲೀಟರ್ ಸೀಮೆಎಣ್ಣೆಯ ಬಿಡುಗಡೆಗೊಂಡಿದೆ. ಉಳಿದಂತೆ 18,618 ಕಿಲೋಲೀಟರ್ ಸೀಮೆಎಣ್ಣೆ ಬಂದಿಲ್ಲ ಎಂದರೆ, ರಾಜ್ಯ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಷ್ಟು ದಿನ ಸರಕಾರ ಏನು ನಿದ್ದೆ ಮಾಡುತ್ತಿದೆಯೇ?, ಮೀನುಗಾರರು ಏನು ಆತ್ಮಹತ್ಯೆ ಮಾಡಿಕೊಳ್ಳಬೇಕೇ?, ಸರಕಾರ ನಾಡದೋಣಿ ಮೀನುಗಾರಿಕೆ ಪರವಾನಗಿದಾರರಿಗೆ ಮಾಸಿಕ ತಲಾ 300 ಲೀಟರ್ ಸೀಮೆಎಣ್ಣೆಯನ್ನು ಕೂಡಲೇ ವಿತರಿಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

ಸಿಎಂ ಜತೆ ಚರ್ಚೆ: ‘ನಾಡದೋಣಿ ಮೀನುಗಾರರಿಗೆ ಮಾಸಿಕ 300 ಲೀಟರ್ ಸೀಮೆಎಣ್ಣೆ ನೀಡಲು ಕೇಂದ್ರ ಸರಕಾರ 18,618 ಕಿಲೋಲೀಟರ್ ಸೀಮೆಎಣ್ಣೆ ಕೇಂದ್ರದಿಂದ ಬಿಡುಗಡೆ ಆಗಬೇಕು. ಅದು ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಬಿಡುಗಡೆಯಾಗುವ ಸೀಮೆಎಣ್ಣೆಯನ್ನು ಸರಕಾರವೇ ಖರೀದಿಸಿ ಮೀನುಗಾರರಿಗೆ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಎಸ್. ಅಂಗಾರ ಉತ್ತರ ನೀಡಿದರು.

ಆರಂಭಕ್ಕೆ ಮಾತನಾಡಿದ ಸಂಜೀವ್ ಮಠಂದೂರು, ವಿಪಕ್ಷ ಉಪನಾಯಕ ಯು.ಟಿ.ಖಾದರ್, ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಸೇರಿದಂತೆ ಇನ್ನಿತರ ಸದಸ್ಯರು, ‘ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ವಿತರಿಸಲು ಸರಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

Similar News