ಮಂಗಳೂರು ಸೆಂಟ್ರಲ್-ಮೀರಜ್ ಎಕ್ಸ್‌ಪ್ರೆಸ್ ಕೂಡಲೇ ಆರಂಭಿಸಿ

Update: 2022-12-27 04:55 GMT

ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ಮೂರು, ಅವುಗಳಲ್ಲಿ ಒಂದು ಕರಾವಳಿ ಕರ್ನಾಟಕ ಮತ್ತು ಇನ್ನೆರಡು ಉತ್ತರ ಕರ್ನಾಟಕದಲ್ಲಿವೆ. ಈ ನಗರಗಳು ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯು ಪ್ರವಾಸಿ, ಧಾರ್ಮಿಕ ಸ್ಥಳಗಳಿಗೆ ಹೆಸರುವಾಸಿಯಾಗಿದ್ದು, ಅದರಲ್ಲೂ ಮಂಗಳೂರು ಧಾರ್ಮಿಕ, ಪ್ರವಾಸಿ, ಶೈಕ್ಷಣಿಕ, ವಾಣಿಜ್ಯ ಕೇಂದ್ರವಾಗಿದ್ದು, ಇದು ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದೆ. ಮುಂಚೆ, ಮೀಟರ್ ಗೇಜ್ ಇದ್ದಾಗ, ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 11 ಗಂಟೆಗೆ ಹೊರಟು ಹಾಸನ ಅರಸೀಕೆರೆ ಮಾರ್ಗವಾಗಿ ಮಹಾರಾಷ್ಟ್ರದ ಮೀರಜ್ ತನಕ (ತಲುಪುವ ಸಮಯ ಮರುದಿನ ರಾತ್ರಿ 9:50) ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 6204) ಓಡುತ್ತಿತ್ತು.

ಈ ರೈಲು, ಮೀರಜ್‌ನಿಂದ ಬೆಳಗಾವಿ, ಲೋಂಡ, ಧಾರವಾಡ, ಹುಬ್ಬಳ್ಳಿ, ಹರಿಹರ, ಬೀರೂರು, ಅರಸೀಕೆರೆ, ಹಾಸನ, ಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ತಲುಪುತ್ತಿತ್ತು.

ಅಂತೆಯೇ ರೈಲು ಸಂಖ್ಯೆ 6203 ಬೆಳಗ್ಗೆ 6.40ಕ್ಕೆ ಹೊರಟು ಮರುದಿನ ಬೆಳಗ್ಗೆ 5:15 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪುತ್ತಿತ್ತು. ಈ ರೈಲಿನ ನಿರ್ವಹಣೆಯನ್ನು ಮಂಗಳೂರು ಸೆಂಟ್ರಲ್‌ನಲ್ಲಿ ದಕ್ಷಿಣ ರೈಲ್ವೆಯು ಮಾಡುತ್ತಿತ್ತು.

ಉತ್ತಮ ಜನಸ್ಪಂದನೆ ಇದ್ದು, ದಕ್ಷಿಣ ಕರ್ನಾಟಕವನ್ನು ದಕ್ಷಿಣ ಮಹಾರಾಷ್ಟ್ರದೊಡನೆ ಜೋಡಿಸುವ ಮಹಾಲಕ್ಷ್ಮಿಎಕ್ಸ್‌ಪ್ರೆಸ್ ರೈಲು ಸಂಖ್ಯೆ (6203- 6204) ಗೇಜ್ ಪರಿವರ್ತಿಸುವ ಸಮಯದಲ್ಲಿ ನಿಲ್ಲಿಸಿದ್ದು; ಬ್ರಾಡ್ ಗೇಜಿಗೆ ಹಳಿ ಪರಿವರ್ತನೆಯಾಗಿ ಎರಡು ದಶಕಗಳೇ ಕಳೆದರೂ ಈ ರೈಲನ್ನು ಪುನರಾರಂಭಿಸಿಲ್ಲ. ಗೇಜ್ ಪರಿವರ್ತನೆಯ ನಂತರ 2007ರಿಂದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ಬಿಟ್ಟು ಇತರ ಎಲ್ಲಾ ರೈಲುಗಳು ಆರಂಭಗೊಂಡಿವೆ. 90ರ ದಶಕದಲ್ಲಿ ಈ ರೈಲಿನಿಂದ ಸಾವಿರಾರು ಪ್ರಯಾಣಿಕರು ಪ್ರಯೋಜನ ಪಡೆಯುತ್ತಿದ್ದರು. ನಿಲ್ಲಿಸಿದ್ದ ರೈಲನ್ನು ಮರು ಆರಂಭಿಸಲು ಹಲವಾರು ಮನವಿಗಳನ್ನು ಈ ಭಾಗದ ಸಂಸದ, ಶಾಸಕರಿಗೆ ನೀಡಲಾಗಿದೆ.

ಮಂಗಳೂರು, ಪುತ್ತೂರು, ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್ ಮುಂತಾದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಈ ರೈಲನ್ನು ಹಾಸನ, ಅರಸೀಕೆರೆ ಮಾರ್ಗವಾಗಿ ಮತ್ತೆ ಆರಂಭಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ರೈಲ್ವೆ ಸಚಿವಾಲಯ, ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ, ಸನ್ಮಾನ್ಯ ಸಂಸದರಿಗೆ ಪ್ರತೀ ದಿನ ವಿನಂತಿಗಳು ಬರುತ್ತಲೇ ಇವೆ. ಕರಾವಳಿಯ ಪ್ರಮುಖ ನಗರ ಮಂಗಳೂರಿಗೆ ಪ್ರತಿನಿತ್ಯ, ಸಾವಿರಾರು ಪ್ರಯಾಣಿಕರು ಬಸ್ ಮೂಲಕ ಆಗಮಿಸುತ್ತಿದ್ದಾರೆ. ಹಣ, ಶ್ರಮ ಹಾಗೂ ಸಮಯ ಹೆಚ್ಚು ಬೇಕಾಗುವ ಬಸ್ಸು ದೂರದೂರಿಗೆ ಹೋಗಲು ಸೂಕ್ತವಲ್ಲ. ರೈಲು ನಿದ್ರೆ, ಶೌಚ, ಊಟ-ತಿಂಡಿಗೆ ಅನುಕೂಲವಾಗಿರುವುದಲ್ಲದೆ, ವೃದ್ಧರು, ರೋಗಿಗಳು, ಗರ್ಭಿಣಿಯರಿಗೆ ದೂರದೂರಿನಿಂದ ಪ್ರಯಾಣಿಸಲು ಸುಖಕರ. ಇದೀಗ ಇಂತಹರೆಲ್ಲರೂ ಸೂಕ್ತ ರೈಲು ಸಂಪರ್ಕವಿಲ್ಲದೆ ಕಷ್ಟಪಡುವಂತಾಗಿದೆ. ಆದ್ದರಿಂದ ಈ ರೈಲನ್ನು ಕೂಡಲೇ ಆರಂಭಿಸಬೇಕಾಗಿದೆ.

ತಕ್ಷಣಕ್ಕೆ ಆಗದಿದ್ದರೆ, ರೈಲು ಸಂಖ್ಯೆ 07377/78 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಸ್ಲಿಪ್ ಕೋಚ್‌ಗಳನ್ನು ಸೇರಿಸಿ; ಅದನ್ನು ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್‌ನಲ್ಲಿ ವಿಭಜಿಸಿ; ಸ್ಲಿಪ್ ಭಾಗವು ಮೀರಜ್ ಜಂಕ್ಷನ್‌ವರೆಗೆ ಸಂಚರಿಸುವಂತೆ ಮಾಡಬಹುದು.