ಜಗದಗಲ

Update: 2022-12-27 07:18 GMT

ಕ್ರಿಸ್ಮಸ್ ಟ್ರೀ ವೈಭವ

ಇಕ್ರಿತ್ ದಶಕಗಳ ಹಿಂದೆ ಇಸ್ರೇಲಿ ಪಡೆಗಳಿಂದ ನೆಲಸಮವಾದ ಹಳ್ಳಿ. 1951ರ ಸುಮಾರಿನಲ್ಲಿ ಅಲ್ಲಿಂದ ಫೆೆಲೆಸ್ತೀನಿಯನ್ನರನ್ನು ಹೊರಹಾಕಲಾಯಿತು. ಆ ಗ್ರಾಮವನ್ನು ನಾಶಪಡಿಸಲಾಯಿತು. ಉಳಿದಿದ್ದ ಏಕೈಕ ಕಟ್ಟಡವೆಂದರೆ, 200 ವರ್ಷಗಳಷ್ಟು ಹಳೆಯದಾದ ಚರ್ಚ್.

ಅಲ್ಲಿ ಸುಣ್ಣದ ಕಲ್ಲುಗಳ ಅವಶೇಷಗಳ ನಡುವೆ, ಕೆಂಪು ಮತ್ತು ಚಿನ್ನದ ಬಣ್ಣದ ಬಾಬಲ್‌ಗಳಿಂದ ಅಲಂಕರಿಸಲ್ಪಟ್ಟ ಕ್ರಿಸ್ಮಸ್ ಮರವು ಆ ಹಳ್ಳಿಯ ಹಳೆಯ ಕಳೆಯನ್ನು ಮರಳಿಸಿದೆ. ಹಿಂದಿನ ನಿವಾಸಿಗಳು ಮತ್ತು ಅವರ ವಂಶಸ್ಥರು ರಂಗೇರಿದ ಸಂಜೆಯಲ್ಲಿನ ಆ ಸೊಗಸನ್ನು ವೀಕ್ಷಿಸಿ ಧನ್ಯತೆ ಅನುಭವಿಸಿದರು.

ಕೃಷಿಭೂಮಿ ಮತ್ತು ಹಳ್ಳಿಯ ಸ್ಮಶಾನದ ಮೇಲಿರುವ ಬೆಟ್ಟದ ಮೇಲಿರುವ ಚರ್ಚ್ ಅನ್ನು 19ನೇ ಶತಮಾನದ ಆರಂಭದಲ್ಲಿ ಸಿರಿಯಾದ ಪಾದ್ರಿಯೊಬ್ಬರು ಸ್ಥಾಪಿಸಿದರು, ಅವರನ್ನು ಒಳಗೆ ಸಮಾಧಿ ಮಾಡಲಾಗಿದೆ. ಕಲ್ಲುಗಳ ಮೇಲ್ಭಾಗದಲ್ಲಿ ಶಿಲುಬೆಗಳು ಮತ್ತು ಅರ್ಧಚಂದ್ರಾಕೃತಿಗಳ ಸಣ್ಣ ಮುದ್ರಣಗಳನ್ನು ಕಾಣಬಹುದು. ಇಸ್ಲಾಮಿಕ್ ವಾಸ್ತುಶಿಲ್ಪದಿಂದ, ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮದ ಸಾಮೀಪ್ಯವಿರುವುದು ಇಕ್ರಿತ್ ಗ್ರಾಮದ ನಿವಾಸಿಗಳಾಗಿದ್ದವರಿಗೆಲ್ಲ ಅತಿ ಮೆಚ್ಚಿನ ಸಂಗತಿ.

ಇಕ್ರಿತ್‌ನಿಂದ ಬಲವಂತವಾಗಿ ಸ್ಥಳಾಂತರಿಸಲ್ಪಟ್ಟವರು ಅಲ್ಲಿಗೆ ಹಿಂದಿರುಗುವ ಪ್ರಯತ್ನಗಳನ್ನು ಇಸ್ರೇಲಿ ಸರಕಾರ ಮತ್ತು ಮಿಲಿಟರಿ ಪದೇ ಪದೇ ನಿರ್ಬಂಧಿಸಿದೆ. 1960ರ ದಶಕದ ಉತ್ತರಾರ್ಧದಲ್ಲಿ, ಇಸ್ರೇಲಿ ಮಿಲಿಟರಿ ಆಡಳಿತ ಕೊನೆಗೊಂಡ ನಂತರ ಮಾಜಿ ನಿವಾಸಿಗಳು ಮತ್ತು ಅವರ ಕುಟುಂಬಗಳು ಗ್ರಾಮಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು ಮತ್ತು ಅವರಿಗೆ ದೇಶದಾದ್ಯಂತ ಹೆಚ್ಚು ಮುಕ್ತವಾಗಿ ಓಡಾಡಲು ಅವಕಾಶ ನೀಡಲಾಯಿತು. ಆದರೆ ಅಲ್ಲಿಗೆ ಹಿಂದಿರುಗಿ ನೆಲೆಸುವ ಅವಕಾಶವಿನ್ನೂ ಸಿಕ್ಕಿಲ್ಲ.

ನಾಶವಾದ ಇನ್ನೂ ಹಲವು ಫೆಲೆಸ್ತೀನಿಯನ್ ಹಳ್ಳಿಗಳದ್ದು ಇಕ್ರಿತ್‌ನಂಥದೇ ಸ್ಥಿತಿ. 1948ರಲ್ಲಿ ಇಸ್ರೇಲ್ ಅನ್ನು ರಾಜ್ಯವಾಗಿ ಸ್ಥಾಪಿಸುವ ಯುದ್ಧದ ಸಮಯದಲ್ಲಿ ಸುಮಾರು 7 ಲಕ್ಷ ಫೆಲೆಸ್ತೀನಿಯನ್ನರು ಹೊರಹಾಕಲ್ಪಟ್ಟರು. ಅದನ್ನೊಂದು ದುರಂತವೆಂದೇ ಹೇಳಲಾಗುತ್ತದೆ. ಸ್ಥಳಾಂತರಗೊಂಡ ಲಕ್ಷಾಂತರ ಪೆಲೆಸ್ತೀನಿಯನ್ನರು ಮತ್ತು ಅವರ ಲಕ್ಷಾಂತರ ವಂಶಸ್ಥರಿಗೆ ಹಿಂದಿರುಗುವ ಹಕ್ಕು ಸಿಗಬೇಕೆಂಬುದು ಬಹಳ ಹಿಂದಿನಿಂದಲೂ ಫೆಲೆಸ್ತೀನಿಯನ್-ಇಸ್ರೇಲಿ ಶಾಂತಿ ಮಾತುಕತೆಗಳಲ್ಲಿನ ಪ್ರಮುಖ ಬೇಡಿಕೆ. ಆದರೆ ಇಸ್ರೇಲ್ ತಿರಸ್ಕರಿಸುತ್ತಲೇ ಇದೆ.

ಸ್ಥಳಾಂತರಗೊಂಡವರು ಮತ್ತೆ ಮರಳಿದರೆ ರಾಜಕೀಯ ಮಟ್ಟದಲ್ಲಿ ಅದು ಉಂಟುಮಾಡುವ ಭೀಕರ ಪರಿಣಾಮಗಳ ಭಯದಿಂದಲೇ ಸರಕಾರ ಅವರು ಹಿಂದಿರುಗಲು ಅನುಮತಿ ನೀಡುತ್ತಿಲ್ಲ ಎನ್ನಲಾಗುತ್ತದೆ. ಸ್ಥಳಾಂತರಗೊಂಡವರ ಪುನರ್ವಸತಿ ವಿಚಾರವನ್ನು ಪೆಲೆಸ್ತೀನಿಯನ್ ಪ್ರಾಧಿಕಾರವು ಪ್ರಚಾರ ಮತ್ತು ರಾಜಕೀಯಕ್ಕಾಗಿ ಬಳಸುತ್ತದೆ ಎಂಬ ಆರೋಪಗಳಿವೆ.

ಅನೇಕರು ತಮ್ಮ ಪೂರ್ವಜರ ಹಳ್ಳಿಗಳಿಗೆ ಮರಳಲು ಆಶಿಸುತ್ತಿದ್ದಾರೆ. ಇಕ್ರಿತ್ ಸುತ್ತಲಿನ ಗೀಚುಬರಹಗಳಲ್ಲಿ ಆ ಕನಸು ವ್ಯಕ್ತವಾಗುತ್ತದೆ. ‘‘ನಾವು ನಿರಾಶ್ರಿತರಾಗಿ ಉಳಿಯುವುದಿಲ್ಲ. ನಾವು ಹಿಂದಿರುಗುತ್ತೇವೆ’’ ಎಂಬಂತಹ ಗೋಡೆ ಬರಹಗಳು ಅಲ್ಲೆಲ್ಲ ಕಾಣಿಸುತ್ತವೆನ್ನುತ್ತವೆ ವರದಿಗಳು.

ಶಿಥಿಲಗೊಂಡಿರುವ ಚರ್ಚ್‌ಗೆ ಆಗಾಗ ಭೇಟಿ ಕೊಡುವ ಜನರು ಅದನ್ನು ಶುಚಿಗೊಳಿಸಿ, ಹಳೆಯ ಇಕ್ರಿತ್‌ನ್ನು ಕಾಣುತ್ತಿದ್ದಾರೆ. ಅಲ್ಲಿ ಕ್ರಿಸ್ಮಸ್ ಮರವನ್ನು ನಿರ್ಮಿಸಿ ಸಂಭ್ರಮಿಸಿದ್ದು ಹೊಸ ಆರಂಭದ ಸಂಕೇತದಂತೆಯೇ ಕಾಣಿಸುತ್ತದೆ.

ಅಳಿಯುತ್ತಿರುವ ಹಿಮಕರಡಿಗಳು

ಕೆನಡಾದ ಪಶ್ಚಿಮ ಹಡ್ಸನ್ ಕೊಲ್ಲಿಯಲ್ಲಿ ಹಿಮಕರಡಿಗಳ ಸಂಖ್ಯೆಯು ಕೇವಲ ಐದು ವರ್ಷಗಳಲ್ಲಿ ಶೇ. 27ರಷ್ಟು ಕಡಿಮೆ ಯಾಗಿದೆ ಎಂದು ವರದಿಯೊಂದು ಹೇಳುತ್ತದೆ.

ಸರಕಾರಿ ವರದಿಯ ಪ್ರಕಾರ, ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಹಿಮಕರಡಿಗಳ ಸಂಖ್ಯೆ 2016ರಲ್ಲಿ 842ರಷ್ಟಿದ್ದದ್ದು ಕಳೆದ ವರ್ಷ 618ಕ್ಕೆ ಇಳಿದಿದೆ. ಹವಾಮಾನದಲ್ಲಿನ ಬದಲಾವಣೆಯು ಈ ಅಳಿವಿಗೆ ಒಂದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಆರ್ಕ್ಟಿಕ್ ಭಾಗದಲ್ಲಿ ಈಗ ಪ್ರಪಂಚದ ಉಳಿದ ಭಾಗಗಳಿಗಿಂತ ವೇಗವಾಗಿ ತಾಪಮಾನ ಏರುತ್ತಿದೆ. ಇದರ ಪರಿಣಾಮವಾಗಿ 2050ರ ಹೊತ್ತಿಗೆ ಹಿಮವಿಲ್ಲದ ಸನ್ನಿವೇಶವೊಂದು ತಲೆದೋರಿ ಹಿಮಕರಡಿಗಳು ಇಲ್ಲವಾಗಬಹುದಾದ ಅಪಾಯ ವನ್ನು ಕೂಡ ವಿಜ್ಞಾನಿಗಳು ಕಳವಳ ದಿಂದಲೇ ಊಹಿಸುತ್ತಿದ್ದಾರೆ.

ನೆರೆಯ ಪ್ರದೇಶಗಳಿಗೆ ಕರಡಿ ಗಳ ವಲಸೆಯ ಬಗ್ಗೆಯೂ ವರದಿ ಉಲ್ಲೇಖಿಸುತ್ತದೆ. ಅವು ಪ್ರಪಂಚದಲ್ಲಿ ಹೆಚ್ಚು ಅಧ್ಯಯನ ಕ್ಕೊಳಗಾದ ಮಾದರಿಗಳಾಗಿವೆ. ಅವುಗಳ ವಲಸೆಯು ಚರ್ಚಿಲ್‌ನ ಮ್ಯಾನಿಟೋಬನ್ ಪಟ್ಟಣಕ್ಕೆ ಮಿಲಿಯನ್‌ಗಟ್ಟಲೆ ಡಾಲರ್‌ಗಳ ಮೌಲ್ಯದ ಪ್ರವಾಸೋದ್ಯಮವನ್ನು ತರುವಂಥದ್ದಾಗಿದೆ. ಇದನ್ನು ವಿಶ್ವದ ಹಿಮಕರಡಿ ರಾಜಧಾನಿ ಎಂದೇ ಕರೆಯಲಾಗುತ್ತದೆ.

ಅಪರೂಪದ ಸ್ಮಾರಕಗಳು

ಉಕ್ರೇನ್ ಕೆಲವು ಗುಹೆ ಸಂಕೀರ್ಣಗಳ ನೆಲೆಯಾಗಿದೆ. ಅಂಥ ಗುಹೆಗಳ ಬಗ್ಗೆ ಕುತೂಹಲದಿಂದ ಸಂಶೋಧನೆಯಲ್ಲಿ ತೊಡಗಿರುವವರು ಅನೇಕ ಕಡೆಗಳಲ್ಲಿ ಬೆಟ್ಟದ ಮೂಲೆಯಲ್ಲಿ ಕೆಲವು ಪೊದೆಗಳನ್ನು ಮತ್ತು ಇಟ್ಟಿಗೆಗಳ ರಾಶಿಯನ್ನು ಗುರುತಿಸಿದ್ದಾರೆ. ಅದರ ಸುಳಿವಿನಲ್ಲಿ ಕಂಡಿರುವ ಸುರಂಗದ ಪ್ರವೇಶದ್ವಾರವು ಬೆಟ್ಟದೊಳಗೆ ಹೋಗುವುದನ್ನು ಕಂಡುಕೊಂಡಿದ್ದಾರೆ.

ಇಲ್ಲಿಯವರೆಗೆ ಬೆಟ್ಟಗಳ ಸುತ್ತಲೂ ನಾಲ್ಕು ಸುರಂಗಗಳ ಪ್ರವೇಶದ್ವಾರಗಳನ್ನು ಕಂಡುಹಿಡಿದಿದ್ದಾರೆ. ಅತ್ಯಂತ ಸುಲಭವಾಗಿ ಪ್ರವೇಶಿಸಬಹುದಾದ ಸುರಂಗಗಳು 40 ಮೀಟರ್‌ಗಳಷ್ಟು ವಿಸ್ತಾರ ಹೊಂದಿವೆ. ಸುರಂಗಗಳ ಒಳಗೆ ಕೊಠಡಿಗಳಿವೆ. ಅಲ್ಲಿ ಕಂಡಿರುವ ಕ್ಯೂಬಿಹೋಲ್‌ಗಳನ್ನು ಲಾಂಧ್ರಗಳನ್ನು ಇರಿಸಲು ಬಳಸಿರಬಹುದು ಎಂದು ಪುರಾತತ್ವಶಾಸ್ತ್ರಜ್ಞರು ಭಾವಿಸುತ್ತಾರೆ.

ಇವು ಮಹತ್ವದ ಮತ್ತು ವಿಶೇಷ ಆವಿಷ್ಕಾರ ಎಂಬುದು ಪರಿಣಿತರ ಅಭಿಮತ. ಅವುಗಳನ್ನು ಸಾಂಸ್ಕೃತಿಕ ಮೌಲ್ಯಕ್ಕಾಗಿ ಸಂರಕ್ಷಿಸಬೇಕು ಎಂದು ತೀರ್ಮಾನಿಸಿದ್ದಾರೆ. ಗುಹೆಗಳು 1,000 ವರ್ಷಗಳಿಗಿಂತ ಹೆಚ್ಚು ಹಳೆಯವು ಮತ್ತು ಮಧ್ಯಕಾಲೀನ ಮಠದ ಗುಹೆ ಸಂಕೀರ್ಣಗಳ ಹೋಲಿಕೆಗಳನ್ನು ಹೊಂದಿವೆ.

ಇಂಥ ಅಪರೂಪದ ಸುರಂಗಗಳ ಪತ್ತೆಯ ಹೊರತಾಗಿಯೂ ಇಲ್ಲಿ ಅಭಿವೃದ್ಧಿ ಯೋಜನೆಗಳು ಅವುಗಳನ್ನು ಅಳಿಸುವ ಹಾದಿಯಲ್ಲಿವೆ. ಆದರೆ ಅಂಥ ಅಪಾಯಗಳಿಂದ ಗುಹೆ ಸಂಕೀರ್ಣಗಳನ್ನು ಉಳಿಸಿಕೊಳ್ಳುವ ಅಭಿಯಾನವೊಂದು ಸಕ್ರಿಯಗೊಳ್ಳತೊಡಗಿದೆ.

ಇಂಥ ಪ್ರದೇಶಗಳನ್ನು ಸಂರಕ್ಷಿತ ಎಂದು ವರ್ಗೀಕರಿಸಲು ಅಗತ್ಯವಾದ ದಾಖಲೆಗಳನ್ನು ಶೋಧಕರು ಸಂಗ್ರಹಿಸುತ್ತಿದ್ದಾರೆ.

ಯಾವುದೇ ದೇಶದಲ್ಲೂ ಸರಕಾರಗಳಿಗೆ ಬೇರೆ ಬೇರೆ ಕಾರಣಗಳಿಗಾಗಿ ಅಭಿವೃದ್ಧಿ ಯೋಜನೆಗಳು ಮುಖ್ಯವೇ ಹೊರತು, ಸಾಂಸ್ಕೃತಿಕ ಮೌಲ್ಯಗಳಲ್ಲ. ಇಲ್ಲಿಯೂ ಅದೇ ಆಗುತ್ತಿದೆ. ಅದರ ವಿರುದ್ಧ ನಿಂತು, ಗುಹೆ ಸಂಕೀರ್ಣಗಳನ್ನು ಉಳಿಸಿಕೊಳ್ಳುವ ಹೆಜ್ಜೆ ಗಮನ ಸೆಳೆದಿದೆ.