ಉತ್ತರ ಕನ್ನಡ ಮಾದರಿಯಲ್ಲೇ ಉಡುಪಿ, ದ.ಕ ಜಿಲ್ಲೆಗಳಿಗೆ ‘ಕಿಂಡಿ ಅಣೆಕಟ್ಟು ಯೋಜನೆ': ಸಚಿವ ಮಾಧುಸ್ವಾಮಿ

Update: 2022-12-27 11:26 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.27: ಉತ್ತರ ಕನ್ನಡ ಮಾದರಿಯಲ್ಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ‘ಕಿಂಡಿ ಅಣೆಕಟ್ಟು ಯೋಜನೆ ಪ್ರದೇಶ’ದ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಮುದ್ರದ ಉಪ್ಪು ನೀರು ಸಿಹಿ ನೀರಿನೊಂದಿಗೆ ಸೇರ್ಪಡೆಯಾಗದಂತೆ ತಡೆಗಟ್ಟಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು ಯೋಜನೆ ರೂಪಿಸಿದ್ದು, ಅದೇ ಮಾದರಿಯಲ್ಲಿಯೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ ಬಿಡುಗಡೆಯಲ್ಲಿ ಯಾವುದೇ ರೀತಿಯೂ ತಾರತಮ್ಯ ಮಾಡಿಲ್ಲ. ಒಂದು ವೇಳೆ ಸದಸ್ಯರಿಗೆ ಆ ಭಾವನೆ ಇದ್ದರೆ ಪರಿಶೀಲಿಸಿ ಯಾವುದೇ ರೀತಿಯ ಅನ್ಯಾಯ ಆಗದಂತೆ ಕ್ರಮ ವಹಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಆರಂಭಕ್ಕೆ ಮಾತನಾಡಿದ ಸದಸ್ಯ ಯು.ಟಿ.ಖಾದರ್, ತಮ್ಮ ಕ್ಷೇತ್ರವೂ ಸೇರಿದಂತೆ ಲೋಕಸಭಾ ಕ್ಷೇತ್ರದ ಸದಸ್ಯರಿಗೆ ನೀಡುವ ಅನುದಾನ ಮೊತ್ತ ತೀರಾ ಕಡಿಮೆಯಾಗಿದ್ದು, ಅವರ ಸ್ಥಾನಮಾನಕ್ಕೆ ಅನುಗುಣವಾಗಿ ದೊಡ್ಡ ಮೊತ್ತದ ಅನುದಾನವನ್ನು ನೀಡಬೇಕು. ಅದೇ ರೀತಿಯಲ್ಲಿ ತಮಗೂ ಯಾವುದೇ ತಾರತಮ್ಯ ಮಾಡದೆ ಉದಾರವಾಗಿ ಅನುದಾನ ಒದಗಿಸಿದರೆ ಉದ್ದೇಶಿತ ಅಭಿವೃದ್ಧಿ ಯೋಜನೆ ಅನುಷ್ಟಾನ ಸಾಧ್ಯವಾಗಲಿದೆ ಎಂದು ಆಗ್ರಹಿಸಿದರು.

Similar News