ಒಂದು ತಿಂಗಳು ಕಾಲಾವಕಾಶ ಕೇಳಿದರೆ ಹೇಗೆ?: ಸರಕಾರದ ನಡೆಗೆ ಸಭಾಪತಿ ಹೊರಟ್ಟಿ ಅಸಮಾಧಾನ

Update: 2022-12-27 11:58 GMT

ಬೆಳಗಾವಿ, (ಸುವರ್ಣವಿಧಾನಸೌಧ) ಡಿ.27: ಸದಸ್ಯರ ಉತ್ತರ ಒದಗಿಸಲು ಹದಿನೈದು ದಿನಗಳ ಕಾಲ ಅವಕಾಶ ಕೋರಿದ್ದಕ್ಕೆ ಸರಕಾರದ ನಡೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರ ಪ್ರಶ್ನೋತ್ತರಗಳನ್ನು ನಿರ್ಲಕ್ಷಿಸಬೇಡಿ ಎಂದು ತಾಕೀತು ಮಾಡಿದರು.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ವಿಪಕ್ಷ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು 15 ದಿನಗಳ ಕಾಲ ಅವಕಾಶ ನೀಡುವಂತೆ ಕೋರಿದ್ದ ಪತ್ರಗಳನ್ನು ನೋಡಿ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಈ ರೀತಿ ಪದೇ ಪದೇ ಅರ್ಥ ಇಲ್ಲದೆ ಪತ್ರ ನೀಡುವುದು ಸರಿಯಾದ ಕ್ರಮವಲ್ಲ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿಗೆ ಅವರಿಗೆ ಸೂಚಿಸಿದರು.

ಹತ್ತು ದಿನಗಳ ಕಾಲ ನಡೆಯುವ ಈ ಸದನಕ್ಕೆ ಹದಿನೈದು ದಿನ, ಒಂದು ತಿಂಗಳು ಕಾಲಾವಕಾಶ ಕೇಳಿದರೆ, ಹೇಗೆ?. ಇಂತಹ ಪತ್ರಗಳನ್ನು ಬರೆಯುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಅಲ್ಲದೆ, ಇಂತಹ ವರ್ತನೆಗಳಿಗೆ ನನಗೆ ಮನಸ್ಸಿನಗೆ ನೋವಾಗುತ್ತದೆ ಎಂದು ನುಡಿದರು.

ಇದಕ್ಕೂ ಮುನ್ನ ಸದಸ್ಯರಾದ ಪ್ರಕಾಶ್ ರಾಥೋಡ್, ಅಬ್ದುಲ್ ಜಬ್ಬಾರ್ ಪ್ರಸ್ತಾಪಿಸಿ, ಸರಕಾರ ಈ ರೀತಿ ಹದಿನೈದು ದಿನಗಳ ಕಾಲ ಅವಕಾಶ ಕೇಳಿದರೆ, ನಾವೇಕೆ ಪ್ರಶ್ನಿಸಬೇಕು ಎಂದು ಹೇಳಿದರು. 

ಆನಂತರ, ಸರಕಾರದ ಪರವಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಸ್ತಾಪಿಸಿ, ಇಂದು ಸಂಜೆಯೊಳಗೆ ಸರಕಾರದ ಕಡೆಯಿಂದ ಉತ್ತರಗಳನ್ನು ಒದಗಿಸಲಾಗುವುದು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಮಾಜಾಯಿಷಿ ನೀಡಿದರು.

Similar News