ಚಾರ್ಮಾಡಿ ಘಾಟಿ ವ್ಯಾಪ್ತಿಯ ಅರಣ್ಯಕ್ಕೆ ಬೆಂಕಿ: ಅಪಾರ ಪ್ರಮಾಣದ ಅರಣ್ಯ ನಾಶ

Update: 2022-12-27 16:03 GMT

ಚಿಕ್ಕಮಗಳೂರು, ಡಿ.27: ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅಪಾರ ಪ್ರಮಾಣದ ಅರಣ್ಯ ಬೆಂಕಿಗಾಹುತಿಯಾಗಿರುವ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.

ಮೂಡಿಗೆರೆ ತಾಲೂಕು ಬಾಳೂರು ಮೀಸಲು ಅರಣ್ಯದ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿರುವ ಸೋಮನಕಾಡು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅರಣ್ಯ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದರೂ ಸಿಬ್ಬಂದಿ ಸ್ಥಳಕ್ಕೆ ದಾವಿಸುವುದಕ್ಕೂ ಮುನ್ನ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅಪಾರ ಪ್ರಮಾಣದ ಅರಣ್ಯ ಪ್ರದೇಶ ಸುಟ್ಟು ಹೋಗಿದೆ ಎನ್ನಲಾಗಿದೆ.

ಚಿಕ್ಕಮಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರ ಪೈಕಿ ಕಿಡಿಗೇಡಿ ಪ್ರವಾಸಿಗರು ಈ ಕೃತ್ಯ ಎಸಗಿದ್ದಾರೆಂದು ಹೇಳಲಾಗುತ್ತಿದ್ದು, ಘಾಟಿ ವ್ಯಾಪ್ತಿಯ ಬೆಟ್ಟದ ಇಳಿಜಾರಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡು ಧಟ್ಟ ಹೊಗೆ ಆವರಿಸಿದ್ದ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಭಾರೀ ಹರಸಾಹಸ ಪಡುತ್ತಿದ್ದು, ಬೆಂಕಿ ನಂದಿಸು ಕಾರ್ಯಾಚರಣೆ ರಾತ್ರಿಯೂ ಮುಂದುವರಿದಿದೆ ಎಂದು ತಿಳಿದು ಬಂದಿದೆ.

Similar News