ಅಕ್ರಮ ಗಣಿಗಾರಿಕೆ ತಡೆದು ಖನಿಜ ಸಂಪತ್ತನ್ನು ರಕ್ಷಿಸಲು ಖನಿಜ ರಕ್ಷಣಾ ಪಡೆ ಸ್ಥಾಪನೆ: ಸಚಿವ ಹಾಲಪ್ಪ ಆಚಾರ್
Update: 2022-12-27 22:02 IST
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 27: ರಾಜ್ಯದ ಖನಿಜ ಮತ್ತು ಉಪಖನಿಜ ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ಹಾಗೂ ಖನಿಜ ಸಂಪತ್ತನ್ನ ಸಂರಕ್ಷಿಸಿ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಪ್ರತಿ ಜಿಲ್ಲೆಯಲ್ಲಿ ಖನಿಜ ರಕ್ಷಣಾ ಪಡೆಯನ್ನು ಸ್ಥಾಪಿಸಲಾಗಿದೆ.
ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಗಸ್ತು ವಾಹನಗಳಿಗೆ ಚಾಲನೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ‘ಪೊಲೀಸ್ ಕಂದಾಯ, ಅರಣ್ಯ, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಖನಿಜ ಮತ್ತು ಉಪಖನಿಜಗಳ ಅನಧಿಕೃತ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಣಿಕೆ ವಿರುದ್ದ ಕ್ರಮಕೈಗೊಳ್ಳಲು ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ. ಆದಾಗ್ಯೂ ಸದರಿ ಇಲಾಖೆಗಳಿಂದ ಅಕ್ರಮ ಖನಿಜ ಮತ್ತು ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟುವ ಕ್ರಮಗಳು ಹೆಚ್ಚಿನ ಪರಿಣಾಮಕಾರಿ ಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.