ಹಾಸನ | ಕೊರಿಯರ್​​ ಮೂಲಕ ಬಂದಿದ್ದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ತಿರುವು: ಇಬ್ಬರು ವಶಕ್ಕೆ

Update: 2022-12-27 18:27 GMT

ಹಾಸನ, ಡಿ, 27 : ಕೊರಿಯರ್​​ ಮೂಲಕ ಬಂದಿದ್ದ ಹೊಸ ಮಿಕ್ಸರ್ ಒಂದು ​ಸ್ಫೋಟಗೊಂಡಿದ್ದು, ಅಂಗಡಿ  ಮಾಲಕ ಗಂಭೀರ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವು ಸಿಕ್ಕಿದೆ. 

ಮಂಗಳವಾರ ಈ ಕುರಿತು  ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್‌ಪಿ ಹರಿರಾಮ್ ಶಂಕರ್, ಇದೊಂದು ವೈಯಕ್ತಿಕ ದ್ವೇಷದಿಂದ ನಡೆದಿರುವ ಘಟನೆ ಎಂದು ತಿಳಿಸಿದ್ದಾರೆ. 

ಇದು ಉಗ್ರ ಸಂಘಟನೆ ಕೈವಾಡವಲ್ಲ. ಬದಲಿಗೆ ಪಾರ್ಸಲ್ ಪಡೆಯಬೇಕಾಗಿದ್ದ ವ್ಯಕ್ತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್  ಮಾಡಲಾಗಿದೆ. ಇದರಲ್ಲಿ ಉಗ್ರರು ನಡೆಸುವ ಯಾವುದೇ ರೀತಿಯಾದ ತಂತ್ರಜ್ಞಾನ ಬಳಸಿಲ್ಲ. ಮೈಸೂರಿನ ಎಫ್‌ಎಸ್‌ಎಲ್ ತಂಡ ಕೆಲವು ಅವಶೇಷಗಳನ್ನು ಪಡೆದು ಪರಿಶೀಲಿಸಿದ್ದಾರೆ. ಇದರಲ್ಲಿ ಯಾವುದೇ ಉಗ್ರರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಕೊರಿಯರ್ ಪಡೆದು ವಾಪಸ್ ನೀಡಿದವರನ್ನು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆಯಿಂದ ಶೀಘ್ರ ಸತ್ಯಾಂಶ ಹೊರಬೀಳಲಿದೆ ಎಂದರು.  

ಮಿಕ್ಸಿ ಸ್ಫೋಟದಿಂದಾಗಿ ಕೊರಿಯರ್ ಸರ್ವೀಸ್‌ನ ಮಾಲಕ ಶಶಿಕುಮಾರ್ ಎಂಬವರಿಗೆ ಕೈ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದೆ. ಆತನನ್ನು ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

ಉಗ್ರ ಸಂಘಟನೆಗಳ ನಂಟಿದೆಯೇ ಅಥವಾ ಇನ್ಯಾವ ಕಾರಣಕ್ಕಾಗಿ ಸ್ಫೋಟಿಸಲಾಗಿದೆ ಎಂಬುದರ ಬಗ್ಗೆ ಪೊಲೀಸರ ತಂಡ ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿತು. ಕೊರಿಯರ್ ಬಂದ ಸ್ಥಳದಿಂದ ಹಿಡಿದು ತಲುಪಿದ ಸ್ಥಳದವರೆಗೂ ತೀವ್ರ ವಿಚಾರಣೆ ನಡೆಸಿದಾಗ ಕೆಲವು ಸತ್ಯಾಂಶಗಳು ಹೊರಬಂದಿದೆ. ಈಗಾಗಲೇ ಬಾಂಬ್ ನಿಷ್ಕ್ರಿಯ ದಳ, ಎಫ್‌ಎಸ್‌ಎಲ್ ತಂಡ ಹಾಗೂ ಆಂತರಿಕ ಭದ್ರತಾ ತಂಡದವರೂ ಕೂಡ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಉಗ್ರ ಸಂಘಟನೆಗಳ ನಂಟಿನ ಬಗ್ಗೆ ಯಾವುದೇ ಸುಳಿವುಗಳಿಲ್ಲ. ಆದ್ದರಿಂದ ನಗರದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಸುಳ್ಳು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ಯಾರೂ ನಂಬಬಾರದು. ಇಲೆಕ್ಟ್ರಾನಿಕ್ ಶಾರ್ಟ್ ಸರ್ಕ್ಯೂರ್ಟ್‌ಂದ ಇಷ್ಟೊಂದು ಪ್ರಮಾಣದ ಸ್ಫೋಟವಾಗುವುದಿಲ್ಲ. ಮಿಕ್ಸಿಯಲ್ಲಿ ಸಣ್ಣ ಪ್ರಮಾಣದ ಸ್ಫೋಟಕದ ವಸ್ತುಗಳನ್ನು ಇರಿಸಿ ಸ್ಫೋಟಿಸಲಾಗಿದೆ. ಯಾವುದೇ ಊಹಾಪೋಹಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Similar News