×
Ad

VIDEO- ಕಾಂಗ್ರೆಸ್ ನ ಹಿರಿಯ ನಾಯಕ ಆರ್.ವಿ ದೇಶಪಾಂಡೆಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ

Update: 2022-12-28 11:59 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.28:ಕಾಂಗ್ರೆಸ್ಸಿನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ರಘುನಾಥ್ ವಿಶ್ವನಾಥ್ ರಾವ್ ದೇಶಪಾಂಡೆ ಅವರಿಗೆ 2022ನೆ ಸಾಲಿನ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ಯನ್ನು ವಿಧಾನಸಭೆಯಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. 

ಬುಧವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಅತ್ಯುತ್ತಮ ಶಾಸಕ ಪ್ರಶಸ್ತಿ’ಗೆ ಆರ್.ವಿ.ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

1995ರಿಂದಲೂ ಲೋಕಸಭೆಯಲ್ಲಿ ಅಸಾಧಾರಣ ಸಂಸದೀಯ ಪಟ್ಟು ಪ್ರಶಸ್ತಿ ನೀಡಿ ಗೌರವಿಸುವುದು ರೂಢಿಯಲ್ಲಿದೆ.ಅದೇ ಮಾದರಿಯಲ್ಲಿ ಅನೇಕ ರಾಜ್ಯಗಳಲ್ಲಿ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ ನೀಡಲಾಗುತ್ತಿದೆ.ಸಂಸದೀಯ ವ್ಯವಸ್ಥೆಯಲ್ಲಿ ವಿಧಾನಮಂಡಲದ ಕಲಾಪದ ಚರ್ಚೆ ಭಾಗವಹಿಸಿದವರನ್ನು ಗುರುತಿಸುವುದು ಹಾಗೂ ಆ ವ್ಯವಸ್ಥೆಗೆ ಶಕ್ತಿ ಕೊಡುವ ಕೆಲಸವಾಗಲಿದೆ.ನಮ್ಮ ರಾಜ್ಯದಲ್ಲೂ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

2021ರಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುತ್ತಿದ್ದು, ಕಳೆದ ವರ್ಷ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಿದ್ದೆವು ಎಂದು ಅವರು ತಿಳಿಸಿದರು.

ಅತ್ಯುತ್ತಮ ಶಾಸಕ ಪ್ರಶಸ್ತಿ ಆಯ್ಕೆಗೆ ಸ್ಪೀಕರ್, ಸಿಎಂ, ವಿಪಕ್ಷ ನಾಯಕರು ಹಾಗೂ ಕಾನೂನು ಸಚಿವರು ಒಳಗೊಂಡ ಸಮಿತಿ ರಚಿಸಲಾಗಿತ್ತು.ಸೆ.15ರಂದು 2022ನೆ ಸಾಲಿನ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ಗೆ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ವರನ್ನು ಸರ್ವಾನುಮತದಿಂದ ಸಮಿತಿಯಿಂದ ಆಯ್ಕೆ ಮಾಡಲಾಯಿತು ಎಂದು ಕಾಗೇರಿ ತಿಳಿಸಿದರು.ಇದಕ್ಕೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಮಾದರಿ ವ್ಯಕ್ತಿ: ಬಳಿಕ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 1983ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ದೇಶಪಾಂಡೆ ಅವರು ಸತತ 8 ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿದ್ದು, ವಿವಿಧ  ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಾರ್ಗದರ್ಶನದಲ್ಲಿ ಬೆಳೆದವರು.10 ಮಂದಿ ಮುಖ್ಯಮಂತ್ರಿಗಳ ಜೊತೆ ಕೆಲಸ ನಿರ್ವಹಿಸಿದ ಅನುಭವವಿದೆ. ವಿಪಕ್ಷ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, 2004ರಲ್ಲಿ ಹಂಗಾಮಿ ಸ್ಪೀಕರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಬಳಿಕ ದೇಶಪಾಂಡೆ ಅವರನ್ನು ಸ್ಪೀಕರ್ ಪೀಠದ ಬಳಿಕ ಆಹ್ವಾನಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಅತ್ಯುತ್ತಮ ಶಾಸಕ ಪ್ರಶಸ್ತಿ’ಯನ್ನು ದೇಶಪಾಂಡೆ ಅವರಿಗೆ ಪ್ರದಾನ ಮಾಡಿದರು.ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಪ್ರಶಸ್ತಿ ಗೌರವ ಹೆಚ್ಚಿಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಅತ್ಯುತ್ತಮ ಶಾಸಕ ಪ್ರಶಸ್ತಿ ಆರ್.ವಿ.ದೇಶಪಾಂಡೆ ಅವರಿಗೆ ನೀಡಿರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ.ಎಂಟು ಬಾರಿ ಶಾಸಕರಾಗಿ ಅವರು ವಿಧಾನಸಭೆಯ ನಡುವಳಿಕೆಯನ್ನು ಪಾಲಿಸಿದ್ದಾರೆ.ಅವರ ಆಯ್ಕೆ ಅತ್ಯುತ್ತಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಹಿಂದುಳಿದಿದ್ದ ಹಳಿಯಾಳ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.ರಾಜ್ಯದ, ದೇಶದ ಹಿತಕ್ಕಾಗಿ ಸದಾಕಾಲ ಚಿಂತಿಸುವವರು. 1983ರಲ್ಲಿ ದೊಡ್ಡ ತಂಡವೆ ಶಾಸನಸಭೆ ಪ್ರವೇಶಿಸಿ ರಾಜಕೀಯದಲ್ಲಿ ಬದಲಾವಣೆಯಾಯಿತು.ಆಗ ದೇಶಪಾಂಡೆಯವರು ಶಾಸಕರಾಗಿ ದಕ್ಷತೆಯಿಂದ ನಿರ್ವಹಿಸಿದ್ದಾರೆ.ಕೈಗಾರಿಕಾ ನೀತಿ ರೂಪಿಸುವಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಆತ್ಮೀಯವಾದ ನಡವಳಿಕೆಯುಳ್ಳ ಅವರು ಪ್ರತಿಪಕ್ಷದವರಾಗಿದ್ದರೂ ಆಡಳಿತ ಪಕ್ಷದ ಜೊತೆ ಹೆಚ್ಚು ಪ್ರೀತಿಯುಳ್ಳವರಾಗಿದ್ದಾರೆ. ಪ್ರಗತಿಪರ ಚಿಂತನೆಯುಳ್ಳ ಅವರು ಹೊಸಬರಿಗೆ ಮಾರ್ಗದರ್ಶನ ನೀಡುತ್ತಿದ್ದು, ಅವರು ನಮಗೆಲ್ಲರಿಗೂ ಮಾದರಿ ಎಂದು ಅವರು ಹೇಳಿದರು.

ತಮ್ಮದೆ ಆದ ಕೊಡುಗೆ: ‘ದೇಶಪಾಂಡೆ ಅಜಾತಶತ್ರು. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಿರಿಯ ಶಾಸಕ.ಅವರಿಗೆ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ ನೀಡಿ ಗೌರವಿಸಿರುವುದು ಸ್ತುತ್ಯಾರ್ಹ.ಸ್ನೇಹಜೀವಿಯಾದ ಅವರು ಶ್ರಮಜೀವಿಯೂ ಹೌದು, ತಮಗೆ ವಹಿಸುವ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವ ಛಾತಿ ರೂಢಿಸಿಕೊಂಡಿದ್ದಾರೆ.8ಬಾರಿ ಶಾಸಕರಾಗಿರುವ ಅವರು, ರಾಜ್ಯದ ಒಳಿತಿಗಾಗಿ ಶ್ರಮಿಸಿದ್ದಾರೆ.ಸದನಕ್ಕೆ ಹಾಜರಾಗಿ ಅರ್ಥಪೂರ್ಣ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.12ವರ್ಷ ಕೈಗಾರಿಕಾ ಸಚಿವರಾಗಿ ಕೈಗಾರಿಕಾ ಬೆಳವಣಿಗೆಗೆ ತಮ್ಮದೆ ಕೊಡುಗೆ ನೀಡಿದ್ದಾರೆ’

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

---------------------------------------
ಜನರ ಋಣ ತೀರಿಸಬೇಕು: ‘ಅತ್ಯುತ್ತಮ ಶಾಸಕ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ಸ್ಪೀಕರ್ ನೇತೃತ್ವದ ಸಮಿತಿಯ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವೆ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ. ರಾಜಕಾರಣಿಗಳ ಬಗ್ಗೆ ಮೊದಲಿದ್ದ ಗೌರವ ಈಗಿಲ್ಲ. ಇದಕ್ಕೆ ನಾವು ಮತ್ತು ಜನರು ಕಾರಣ. ನಾವು ಶಾಸಕರಾಗಿ ಆಯ್ಕೆಯಾಗಿ ಬಂದ ನಂತರ ಜನಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ಭಾವಿಸಬೇಕು.ಸದನದಲ್ಲಿ ನೂತನ ಶಾಸಕರು ಸದನದಲ್ಲಿ ಶಿಸ್ತು ಪಾಲಿಸಬೇಕು.ಸ್ಪೀಕರ್ ಸೂಚನೆಗಳಿಗೆ ಗೌರವ ಸಲ್ಲಿಸಬೇಕು.ಜತೆಗೆ ಕ್ಷೇತ್ರದ ಜನರ ಋಣ ತೀರಿಸಬೇಕು’

-ಆರ್.ವಿ.ದೇಶಪಾಂಡೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ

Similar News