ಸಿದ್ದರಾಮಯ್ಯರ ವಯಸ್ಸಿನ ನಿಖರತೆ ಅರಿಯಲು ತನಿಖೆ..!: ಸದನದಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆ

Update: 2022-12-28 10:54 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 28: ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ‘ವಯಸ್ಸಿನ ನಿಖರತೆ ಅರಿಯಲು ತನಿಖೆ’ ನಡೆಸಲು ಸದನ ಸಮಿತಿ ರಚನೆ ಮಾಡಬೇಕೆಂಬ ಆಗ್ರಹ ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಬುಧವಾರ ವಿಧಾನಸಭೆಯಲ್ಲಿಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ ಪ್ರದಾನ ಮಾಡಿದ ನಂತರ ಅವರನ್ನು ಅಭಿನಂದಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ದೇಶಪಾಂಡೆ ನನಗಿಂತ ನಾಲ್ಕು ತಿಂಗಳು ದೊಡ್ಡವ. ಆದರೆ, ನನಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಾನೆ. ಕಾರಣಗಳಿಂದ ಸ್ವಲ್ಪ ಕುಗ್ಗಿದ್ದಾರೆ’ ಎಂದು ಹೇಳಿದರು.

ಈ ವೇಳೆ ಮಧ್ಯೆಪ್ರವೇಶಿಸಿ ಕಾಂಗ್ರೆಸ್ ಸದಸ್ಯ ಕೃಷ್ಣ ಭೈರೇಗೌಡ, ‘ಸಿದ್ದರಾಮಯ್ಯರನ್ನು ನೋಡಿದರೆ, ಅವರಿಗೆ 75 ವರ್ಷ ಆಗಿದೆಯೇ ಎಂಬ ಬಗ್ಗೆ ಅನುಮಾನ ಮೂಡುತ್ತದೆ.ದಾವಣಗೆರೆಯಲ್ಲಿ ನಡೆದ ಅವರ 75ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಹಾಜರಿದ್ದ ಎಐಸಿಸಿ ಮುಖಂಡ ರಾಹುಲ್ ಗಾಂಧಿ, ‘ಸಿದ್ದರಾಮಯ್ಯ ಆರ್ ಯು ರಿಯಲಿ 75 ಇಯರ್ ಓಲ್ಡ್’ ಎಂದು ಅವರ ಕೈಹಿಡಿದೆ ಕೇಳಿದ್ದರು.ಹೀಗಾಗಿ ಅವರ ವಯಸ್ಸಿನ ನಿಖರತೆಯ ಬಗ್ಗೆ ಒಂದು ತನಿಖೆ ಅಗತ್ಯ’ ಎಂದು ಚಟಾಕಿ ಹಾರಿಸಿದರು.

ಮಧ್ಯೆಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಈ ವಿಚಾರದ ಬಗ್ಗೆ  ತನಿಖೆ ನಡೆಸುವಂತೆ ಸೂಚಿಸಲು ನನಗೆ ಅಧಿಕಾರವಿಲ್ಲ. ಹಾಗಾಗಿ ಸದನ ಸಮಿತಿ ರಚನೆ ಮಾಡಬೇಕೆಂದರೆ, ತಮ್ಮ ಅಧಿಕಾರ ಚಲಾಯಿಸಿ ಮಾಡಬಹುದು ಎಂದಾಗ ಸದನದಲ್ಲಿ ನಗುವಿನ ಅಲೆಯುಕ್ಕಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸದನ ಸಮಿತಿ ಕೃಷ್ಣ ಭೈರೇಗೌಡರ ನೇತೃತ್ವದಲ್ಲೇ ಮಾಡಿ’ ಎಂದು ಹೇಳಿದ್ದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು.

‘2023ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ದೇಶಪಾಂಡೆ ಹೇಳಿದ್ದರು.ಆದರೆ, ನಾನು ‘ಇದೊಂದು ಚುನಾವಣೆ ಸ್ಪರ್ಧಿಸು.ನಾನೂ ಸ್ಪರ್ಧಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ’ ಎಂದು ಸಲಹೆ ನೀಡಿದ್ದೇನೆ. ಮಾಜಿ ಸಿಎಂ ಬಿಎಸ್‍ವೈ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ’

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Similar News