ಕೊಡಗು | ಕರಡಿಗೋಡು ಕಾರ್ಯಾಚರಣೆ; ಉಪಟಳ ನೀಡುತ್ತಿದ್ದ ಒಂದು ಕಾಡಾನೆ ಸೆರೆ

Update: 2022-12-28 11:45 GMT

ಮಡಿಕೇರಿ ಡಿ.28 : ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಉಪಟಳ ನೀಡುತ್ತಿದ್ದ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಎರಡು ಕಾಡಾನೆಗಳ ಸೆರೆಗೆ ಅರಣ್ಯ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿದರು. ಆದರೆ ಇಂದು ಒಂದು ಕಾಡಾನೆ ಸೆರೆ ಸಿಕ್ಕಿದೆ.

ಕರಡಿಗೋಡು ಭುವನಹಳ್ಳಿ ಕಾಫಿ ತೋಟದಲ್ಲಿ ಪತ್ತೆಯಾದ 22 ವರ್ಷದ ಗಂಡಾನೆಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಯಿತು. ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ರೈತರು ಬೆಳೆದ ಭತ್ತದ ಬೆಳೆ, ಕಾಫಿ ಫಸಲಿಗೆ ಅಪಾರ ಹಾನಿಯಾಗಿದೆ. ಸಮಸ್ಯೆ ಬಗೆಹರಿಸಲೇಬೇಕೆನ್ನುವ ಗ್ರಾಮಸ್ಥರ ಆಗ್ರಹದ ಹಿನ್ನೆಲೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು.

ದುಬಾರೆ ಸಾಕಾನೆ ಶಿಬಿರದ ಪ್ರಶಾಂತ, ಸುಗ್ರೀವ, ಧನಂಜಯ ಮತ್ತು ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗೂ ಭೀಮ ಸೇರಿದಂತೆ ಒಟ್ಟು 5 ಸಾಕಾನೆಗಳ ನೆರವನ್ನು ಪಡೆಯಲಾಗಿತ್ತು .

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ತಾಲೂಕು ಡಿಸಿಎಫ್  ಚಕ್ರಪಾಣಿ ಹಾಗೂ ಎಸಿಎಫ್ ನೆಹರು ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಪೂವಯ್ಯ,  ಶೂಟರ್  ಅಕ್ರಂ ವನ್ಯಜೀವಿ ವೈದ್ಯಾಧಿಕಾರಿ ಡಾಕ್ಟರ್ ಚಿಟ್ಟಿಯಪ್ಪ  ಸೇರಿದಂತೆ ಸುಮಾರು 72 ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನರ ಹಂತಕ ಆನೆಯನ್ನು ಸೆರೆ ಹಿಡಿಯದ ಇಲಾಖೆ: ಸ್ಥಳೀಯರ ಅಸಮಾಧಾನ

ಕೆಲವು ವರ್ಷಗಳ ಹಿಂದೆ ಬೆಳೆಗಾರರೊಬ್ಬರನ್ನು ಬಲಿ ತೆಗೆದುಕೊಂಡ ಬಳಿಕ ಕರಡಿಗೋಡು ಭಾಗದ ಕಾಫಿ ತೋಟಗಳಿಗೆ ನುಗ್ಗಿ ನಿರಂತರವಾಗಿ ಫಸಲು ನಾಶ ಮಾಡುವುದರ ಜೊತೆಗೆ ಉಪಟಳ ನೀಡುತ್ತಿದ್ದ ಬೃಹತ್ ಗಾತ್ರದ ಕಾಡಾನೆಯನ್ನು ಸೆರೆ ಹಿಡಿಯುವ ಬದಲು ಅರಣ್ಯ ಇಲಾಖೆ ಕುಳ್ಳಾನೆಯೊಂದನ್ನು ಸೆರೆ ಹಿಡಿದಿರುವುದಾಗಿ ಸ್ಥಳೀಯರು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Similar News