ಪರಿಶಿಷ್ಟರ ಕಾಲನಿ ಅಭಿವೃದ್ಧಿಗೆ 4 ಕೋಟಿ ರೂ., ಸ್ಮಶಾನಕ್ಕೆ 21 ಕೋಟಿ ರೂ.: ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2022-12-28 12:25 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.28: ‘ಕೋಲಾರ ಜಿಲ್ಲೆ ಕೆಜಿಎಫ್ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುವ ಕಾಲನಿಗಳ ಅಭಿವೃದ್ಧಿಗೆ ಕೇವಲ 4ಕೋಟಿ ರೂ.,ಸ್ಮಶಾನದ ಅಭಿವೃದ್ಧಿಗೆ 21 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಲೂಟಿ ಆಗಿರುವ ಸಾಧ್ಯತೆಗಳಿವೆ’ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣ ಭೈರೇಗೌಡ ಸಂಶಯ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ರೂಪಕಲಾ ಎಂ. ಅವರ ಪರವಾಗಿ ಪ್ರಶ್ನೆ ಕೇಳಿದ ಕೃಷ್ಣ ಭೈರೇಗೌಡ, ರಾಜ್ಯದಲ್ಲಿನ ಎಲ್ಲ ಕ್ಷೇತ್ರಗಳಲ್ಲಿನ ಸ್ಮಶಾನ ಅನುದಾನವನ್ನು ಕೆಜಿಎಫ್ ಕ್ಷೇತ್ರವೊಂದಕ್ಕೆ ನೀಡಿದ್ದು, ಅಧಿಕಾರಿಗಳು ಲೂಟಿಯ ಉದ್ದೇಶದಿಂದಲೇ ದೊಡ್ಡ ಮೊತ್ತದ ಹಣವನ್ನು ಬಿಡುಗಡೆ ಮಾಡಿದ್ದು, ಈ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಸದಸ್ಯರ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆಜಿಎಫ್ ಕ್ಷೇತ್ರದ ಸ್ಮಶಾನ ಅಭಿವೃದ್ಧಿಗೆ ಮಂಜೂರು ಮಾಡಿರುವ ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆಯಡಿ ಟೆಂಡರ್ ಮೂಲಕ ಅಥವಾ ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಟಾನಕ್ಕೆ ಆದೇಶಿಸಲಾಗಿದೆ.ಅಲ್ಲದೆ, ಪ್ರಗತಿ ಕಾಲನಿ ಯೋಜನೆಯಡಿ ಕ್ಷೇತ್ರದಲ್ಲಿ ಎಸ್ಸಿ ಕಾಲನಿಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Similar News