‘ವೈಶ್ಯ ವಾಣಿ’ ಸಮಾಜ ಹಿಂ.ಪ್ರವರ್ಗ-3 ‘ಬಿ’ಗೆ ಸೇರ್ಪಡೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-12-28 12:28 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.28: ‘ವೈಶ್ಯ ವಾಣಿ’ಸಮಾಜವನ್ನು ಹಿಂದುಳಿದ ಪ್ರವರ್ಗ-3 ‘ಬಿ’ಗೆ ಸೇರ್ಪಡೆ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಅದರ ಉಪಜಾತಿಗಳನ್ನುಕ್ರೂಢೀಕರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್  ಪೂಜಾರಿ ಹೇಳಿದ್ದಾರೆ. 

ಬುಧವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಹರತಾಳ್ ಹಾಲಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ‘ವೈಶ್ಯವಾಣಿ’ ಜನಾಂಗವನ್ನು ಪ್ರವರ್ಗ 3ಬಿ ಗೆ ಸೇರ್ಪಡೆ ಮಾಡಬೇಕೆಂದು ಹಿಂ.ವರ್ಗಗಳ ಶಾಶ್ವತ ಆಯೋಗ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಸಮುದಾಯದ ಉಪಜಾತಿಗಳಿಗೆ ಅನ್ಯಾಯವಾಗದಂತೆ ಸರಕಾರ ಸೂಕ್ತ ಕ್ರಮ ವಹಿಸಲಿದೆ ಎಂದರು.

ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ: ಹಿಂದುಳಿದವರ್ಗಗಳ ಪ್ರವರ್ಗ-1ರಡಿಯಲ್ಲಿ ಬರುವ ವಿವಿಧ ಸಮುದಾಯದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಐದು ರೀತಿ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆಡಳಿತ ಪಕ್ಷದ ಬಿಜೆಪಿ ಸದಸ್ಯೆ ಕೆ.ಪೂರ್ಣಿಮಾ ಪ್ರಶ್ನೆಗೆ ಉತ್ತರಿಸಿದರು.

ಪ್ರವರ್ಗ-1ರಡಿ 95 ಜಾತಿಗಳನ್ನು ಗುರುತಿಸಲಾಗಿದ್ದು, ಈ ವರ್ಗದಲ್ಲಿ ಬರುವ ಮೆಟ್ರಿಕ್ ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಕಾರ್ಯಕ್ರಮದಡಿ ವಿವಿಧ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಐದು ರೀತಿಯ ಶುಲ್ಕಗಳನ್ನು ಮರುಪಾವತಿ ಮಾಡಲಾಗುತ್ತಿದೆ.ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Similar News