ನೂತನ ಸಾರಿಗೆ ಪ್ರಾಧಿಕಾರ ಮಸೂದೆ ಅಂಗೀಕರಿಸಿದ ರಾಜ್ಯ ವಿಧಾನಸಭೆ

Update: 2022-12-28 13:04 GMT

ಬೆಳಗಾವಿ (ಸುವರ್ಣಸೌಧ), ಡಿ.28: ಕರ್ನಾಟಕ ವಿಧಾನಸಭೆಯು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್ ಟಿಎ) ಮಸೂದೆಯನ್ನು ಮಂಗಳವಾರ ಅಂಗೀಕರಿಸಿದೆ. ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು.

ಬೆಂಗಳೂರಿನ ನಗರ ಸಂಚಾರ ಪ್ರದೇಶಕ್ಕೆ ಅನ್ವಯಿಸುವ ಈ ಮಸೂದೆಯು ಈ ಪ್ರದೇಶದಲ್ಲಿ ಅಭಿವೃದ್ಧಿ, ಕಾರ್ಯಾಚರಣೆ, ನಿರ್ವಹಣೆ ಮತ್ತು ನಗರ ಸಂಚಾರದ ಮೇಲ್ವಿಚಾರಣೆಯ ಉದ್ದೇಶವನ್ನು ಹೊಂದಿದೆ.

ಏಕೆ ಈ ಮಸೂದೆ?

ಬೆಂಗಳೂರಿನ ಸಂಚಾರ ದಟ್ಟಣೆಯು ರಾಜ್ಯ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ, ಏಕೆಂದರೆ ಸಂಚಾರ ಸಮಸ್ಯೆಗಳು ಹೂಡಿಕೆದಾರರು ಹಿಂಜರಿಯುವಂತೆ ಮಾಡಬಹುದು ಎಂದು ಅದು ಭಾವಿಸಿದೆ. ವಿವಿಧ ಸಾರಿಗೆ ಮತ್ತು ಪೌರ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆಯಿದ್ದು,ಇದರಿಂದಾಗಿ ಸಾರ್ವಜನಿಕ ಸಾರಿಗೆ ಯೋಜನೆಗಳು ವಿಳಂಬಗೊಳ್ಳುತ್ತಿವೆ ಎಂಬ ದೂರುಗಳೂ ಇವೆ.

ಅಲ್ಲದೆ ರಾಷ್ಟ್ರೀಯ ನಗರ ಸಾರಿಗೆ ನೀತಿಯೂ ಬೆಂಗಳೂರಿನಂತಹ ನಗರಗಳಲ್ಲಿ ಸಮಗ್ರ ಸಾರಿಗೆ ಯೋಜನೆಯನ್ನು ಸಾಧ್ಯವಾಗಿಸಲು ವಿವಿಧ ಇಲಾಖೆಗಳ ಏಕೀಕರಣಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಿದೆ.

ಮಸೂದೆಯ ಅನುಷ್ಠಾನವು ಸುಸ್ಥಿರ ನಗರ ಸಾರಿಗೆ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರಿಗೆ ಸಮಗ್ರ ಸಂಚಾರ ಯೋಜನೆಯನ್ನು ಖಚಿತಪಡಿಸಲಿದೆ. ಭೂ ಬಳಕೆ ಮತ್ತು ಸಾರಿಗೆ ಯೋಜನೆಯ ಏಕೀಕರಣ ಕೂಡ ಪ್ರಮುಖ ಅಂಶಗಳಾಗಿವೆ. ನಗರ ಸಂಚಾರ ಪ್ರದೇಶದಲ್ಲಿ ಪ್ರಯಾಣ ವ್ಯವಸ್ಥೆಯನ್ನು ನಿಯಂತ್ರಿಸಲು ದಟ್ಟಣೆಯ ಪ್ರದೇಶಗಳಲ್ಲಿ ಪಾರ್ಕಿಂಗ್ ಮತ್ತು ಪಾರ್ಕಿಂಗ್ ನಿಯಮಗಳು,ಶುಲ್ಕ ವಿಧಿಸುವಿಕೆ,ವಿಶೇಷ ಉದ್ದೇಶದ ಲೇನ್ಗಳು ಇತ್ಯಾದಿ ಕ್ರಮಗಳಿಗೆ ಅವಕಾಶವನ್ನೂ ಶಾಸನವು ಒದಗಿಸಲಿದೆ.

ಬಿಎಂಎಲ್ ಟಿಎ 36 ಸದಸ್ಯರನ್ನು ಒಳಗೊಂಡಿದ್ದು, ಮುಖ್ಯಮಂತ್ರಿಗಳು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಿಟಿ ಪೊಲೀಸ್, ನೈರುತ್ಯ ರೈಲ್ವೆ ಮತ್ತು ಭಾರತೀಯ ಹೆದ್ದಾರಿ ಪ್ರಾಧಿಕಾರ ಇತ್ಯಾದಿಗಳ ಪ್ರತಿನಿಧಿಗಳು ಬಿಎಂಎಲ್ ಟಿಎ ಸದಸ್ಯರಾಗಿರುತ್ತಾರೆ.

ದಂಡಗಳು

ಬಿಎಂಎಲ್ ಟಿಎ ದ ನಿಯಮಗಳು, ನಿಬಂಧನೆಗಳು, ಆದೇಶಗಳು ಅಥವಾ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲಗೊಳ್ಳುವ ವ್ಯಕ್ತಿಗೆ ಒಂದು ಲ.ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಸಲ ಉಲ್ಲಂಘಿಸಿದರೆ ದಂಡದ ಮೊತ್ತವು ಎರಡು ಲ.ರೂ.ಗಳಿಗೆ ಹೆಚ್ಚಲಿದೆ.

ಉಲ್ಲಂಘನೆಗಳು ಮುಂದುವರಿದರೆ ಆರೋಪಿಗೆ ಉಲ್ಲಂಘನೆಯ ಅವಧಿಯಲ್ಲಿ ಪ್ರತಿದಿನ 5,000 ರೂ.ವರೆಗಿನ ಹೆಚ್ಚುವರಿ ದಂಡವನ್ನು ವಿಧಿಸಲಾಗುವುದು. ಕಾನೂನಿನ ನಿಬಂಧನೆಗಳಡಿ ವಿವಿಧ ರಾಜ್ಯ ಸರಕಾರಿ ಇಲಾಖೆಗಳು ಮತ್ತು ಏಜೆನ್ಸಿಗಳ ಅಧಿಕಾರಿಗಳನ್ನೂ ದಂಡಿಸಬಹುದಾಗಿದೆ.

Similar News