×
Ad

ತುಮಕೂರು: ಕಾಂಗ್ರೆಸ್‌ ಸಭೆಯಲ್ಲಿ ಕುಸಿದುಬಿದ್ದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೃತ್ಯು

Update: 2022-12-28 18:56 IST

ಕೊರಟಗೆರೆ, (ತುಮಕೂರು) ಡಿ.28: ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.  

ಕೊರಟಗೆರೆ ತಾಲೂಕಿನ ಕ್ಯಾಷ್ವಾರ ಗ್ರಾಮದ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ನಾಗರಾಜಪ್ಪ(60) ಮೃತರು ಎಂದು ತಿಳಿದು ಬಂದಿದೆ.  

ಪಟ್ಟಣದ ಸುವರ್ಣಮುಖಿ  ಲಕ್ಷ್ಮೀನರ ಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಯ ಐಕ್ಯತಾ ಸಮಾವೇಶ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಮದ್ಯಾಹ್ನ 1.30 ಕ್ಕೆ ಶಾಸಕ ಡಾ.ಜಿ.ಪರಮೇಶ್ವರ್ ರವರ  ನೇತೃತ್ವದಲ್ಲಿ ಪ್ರಾರಂಭಗೊಂಡಿತ್ತು.  ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕ್ಯಾಶವಾರದ ನಾಗರಾಜು (68) ಅವರು ವೇದಿಕೆಯಲ್ಲಿ  ಭಾಷಣ ಮಾಡಿ ಮುಗಿಸಿದ ತಕ್ಷಣ ಹೃದಯಾಘಾತವಾಗಿ ಕುಸಿಬಿದ್ದರು ಎನ್ನಲಾಗಿದೆ.

ವೇದಿಕೆಯಲ್ಲಿ ಭಾಷಣ ಮಾಡಿ ಕುಸಿಬಿದ್ದ ನಾಗರಾಜುರವರನ್ನು ತಕ್ಷಣ ಪಟ್ಟಣದ  ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ  ನಾಗರಾಜುರವರು ಮೃತಪಟ್ಟಿದ್ದರು ಎಂದು ಹೇಳಲಾಗಿದೆ.  ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ ಶಾಸಕ ಡಾ.ಜಿ. ಪರಮೇಶ್ವರ್ ಸರ್ಕಾರಿ ಆಸ್ಪತ್ರೆಗೆ ತೆರಳಿ ನಾಗರಾಜು ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

ಘಟನೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪರಮೇಶ್ವರ್,   ಈ ಘಟನೆಯೂ ಅತ್ಯಂತ ದು:ಖತಂದಿದ್ದು, ನನ್ನ ಎದುರೆ ನಮ್ಮ ಮುಖಂಡರ ಸಾವು ದಿಗ್ಭ್ರಾಂತಿಯನ್ನುಂಟು ಮಾಡಿದೆ. ಇಂದಿನ ಸಭೆಯನ್ನು ನಿಲ್ಲಿಸಲಾಗಿದ್ದು ಹಾಗೂ ಇಂದು ನಾನು ನಡೆಸಬೇಕಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು, ಸಭೆಗಳನ್ನು ರದ್ದುಗೊಳಿಸಲಾಗಿದೆ. ಕಾಂಗ್ರೆಸ್ ಸಂಸ್ಥಾಪನ ದಿನವೇ ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಪಕ್ಷದ ಸಭೆಯಲ್ಲಿ ಕಳೆದುಕೊಂಡಿದ್ದು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಅವರ ಸಾವನ್ನು ಭರಿಸುವ ದು:ಖ ಭರಿಸುವ ಶಕ್ತಿ  ನೀಡಲಿ ಎಂದರು.

Similar News