ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನ ಖಂಡಿಸಿ ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ

Update: 2022-12-28 16:12 GMT

ಮೈಸೂರು, ಡಿ.28: ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿ ಬಂಧಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮೈಸೂರು ನಗರದ ಇಲವಾಲ ಬಳಿ ಮೈಸೂರು-ಹುಣಸೂರು ಹೆದ್ದಾರಿ ತಡೆದು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮೈಸೂರು ಜಿಲ್ಲಾ ರೈತ ಮುಖಂಡ ಪಿ.ಮರಂಕಯ್ಯ ಮಾತನಾಡಿ, ಮಂಡ್ಯ ನಗರದಲ್ಲಿ ಕಳೆದ 52 ದಿನಗಳಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಇದೂವರೆಗೂ ಈಡೇರಿಸದಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಗೆ ರೈತರು ರಕ್ತದ ಅಭಿಷೇಕ ಮಾಡಿ ತಮ್ಮ ಪ್ರತಿಭಟನೆಯನ್ನು ಮಾಡಿದ್ದರು. ಇದನ್ನು ಸಹಿಸದ ರಾಜ್ಯ ಸರ್ಕಾರ ಪೊಲೀಸರ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಿ ಪ್ರತಿಭಟನೆಗೆಂದು ಹಾಕಲಾಗಿದ್ದ ಟೆಂಟ್ ಕಿತ್ತು ಹಾಕಿ ರೈತರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ರಾಜ್ಯ ಸರ್ಕಾರ ಕೂಡಲೇ ರೈತರ ಕ್ಷೆಮೆ ಕೇಳಬೇಕು ಇಲ್ಲದಿದ್ದರೆ ನಾಳೆಯಿಂದ ರಾಜ್ಯಾದ್ಯಂತ ರೈತ ಸಂಘಟನೆಗಳು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮೈಸೂರು ತಾಲ್ಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್,  ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್,  ಕಲ್ಲೂರು ನಾಗನಹಳ್ಳಿ ಚಂದ್ರಶೇಖರ್, ರಾಘವೇಂದ್ರ, ಶಿವೇಗೌಡ ದಿನೇಶ್, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Full View

Similar News