ಶರಾವತಿ ನಿರಾಶ್ರಿತರ ಹಿತರಕ್ಷಣೆಗೆ ಸರಕಾರ ಬದ್ಧವಾಗಿರಬೇಕು: ಸಿದ್ದರಾಮಯ್ಯ

Update: 2022-12-28 17:15 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.28: ಶರಾವತಿ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಈ ಸರಕಾರವು ಹಿಂಪಡೆದಿರುವ ನಮ್ಮ ಸರಕಾರ ಹೊರಡಿಸಿದ್ದ ಎಲ್ಲ 55 ಪ್ರಕರಣಗಳನ್ನು ಮರು ಸ್ಥಾಪಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ರದ್ದು ಮಾಡಿರುವ 1 ಪ್ರಕರಣದ ವಿರುದ್ಧ ಸರಕಾರ ಮೇಲ್ಮನವಿ ಸಲ್ಲಿಸಬೇಕು. ಅಗತ್ಯ ಇರುವ ಕಡೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಳನ್ನು ಮಂಜೂರು ಮಾಡುವುದು ಹಾಗೂ ಮಂಜೂರು ಮಾಡಿರುವ ಭೂಮಿಗಳನ್ನು ರೈತರ ವಶದಲ್ಲಿಯೆ ತಕ್ಷಣ ಉಳಿಸುವಂತಾಗಬೇಕು. ಒಟ್ಟಿನಲ್ಲಿ ಸಂತ್ರಸ್ತರಿಗೆ ಸರಕಾರದ ಯಾವುದೇ ಇಲಾಖೆಗಳಿಂದ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ನೀಡಲು ಬದ್ಧವಾಗಿರಬೇಕು ಎಂದರು.

ರಾಜ್ಯದ ಜನರಿಗೆ ಅನೇಕ ದಶಕಗಳಿಂದ ಬೆಳಕು ಕೊಟ್ಟಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಪ್ರದೇಶದ ಜನರ ಬದುಕು ಇಂದು ಕತ್ತಲೆಯಲ್ಲಿ ಮುಳುಗಿದೆ. ಶರಾವತಿ ಯೋಜನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟವರಿಗೆ ತಮ್ಮ ಪೂರ್ವಜರು ಬಾಳಿ ಬದುಕಿದ್ದ ನೆಲವನ್ನು, ನೆಲದೊಂದಿನ ನೆನಪುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂಬ ದುಃಖ ಕಾಡಿದ್ದರೂ ನಾಡಿಗಾಗಿ ತ್ಯಾಗದ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲಿ ಈ ಯೋಜನೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದವರು ಇಂದು ತಮ್ಮ ಕಾಳಜಿಗಳಿಗಾಗಿ ಪರಿತಪಿಸುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಯೋಜನೆಗಾಗಿ ಅಂದಾಜು 15,550 ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಇದರಲ್ಲಿ 12,500 ಎಕರೆ ಭತ್ತ ಬೆಳೆಯುತ್ತಿದ್ದ ಪ್ರದೇಶ. 1000 ಎಕರೆ ಅಡಿಕೆ, 2100 ಎಕರೆ ಖುಷ್ಕಿ ಭೂಮಿ ಮುಳುಗಡೆಯಾಗಿತ್ತು. ಪುನರ್ವಸತಿಗಾಗಿ ಅರಣ್ಯ ಇಲಾಖೆಗೆ ಸೇರಿದ 9947 ಎಕರೆ ಜಮೀನನ್ನು ಕಂದಾಯ ಇಲಾಖೆಗೆ ಸುಮಾರು 34 ಸರಕಾರಿ ಆದೇಶಗಳ ಮೂಲಕ 19067.08 ಎಕರೆ ಭೂಮಿಯನ್ನು ಶರಾವತಿ ಸಂತ್ರಸ್ಥರಿಗಾಗಿ ನೀಡಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರಕಾರ ಮಾಡಿದ್ದ ಎಲ್ಲ 55 ಡಿ-ರಿಸರ್ವ್ ಅಧಿಸೂಚನೆಗಳನ್ನೂ ರದ್ದು ಮಾಡಿ ಈ ಸರಕಾರ ಆದೇಶ ಹೊರಡಿಸಿತು. ಇದರ ಜೊತೆಗೆ ಮುಖ್ಯಮಂತ್ರಿ ವಿಧಾನ ಪರಿಷತ್ತಿನಲ್ಲಿ ನೀಡಿರುವ ಹೇಳಿಕೆ ಪ್ರಕಾರ ಶಿವಮೊಗ್ಗ ಜಿಲ್ಲೆಯ 12385.89 ಹೆಕ್ಟೇರ್ ವಿಸ್ತೀರ್ಣದ (30965 ಎಕರೆ) ಭೂಮಿಯ ಎಲ್ಲ ಮಂಜೂರಾತಿಗಳನ್ನೂ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು ಎಂದು ಅವರು ಟೀಕಿಸಿದರು.

ಈ ಕೆಟ್ಟ ಸರಕಾರದ ಅಮಾನವೀಯ ನಿರ್ಧಾರದಿಂದಾಗಿ ಈಗ ಅಂದಾಜು 2.5 ಲಕ್ಷ ಜನರು ಇನ್ನಿಲ್ಲದ ಸಂಕಟಕ್ಕೆ ಸಿಕ್ಕಿಕೊಂಡಿದ್ದಾರೆ. ಡಬಲ್ ಎಂಜಿನ್ ಸರಕಾರ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಬಿಜೆಪಿಗರು ಕೇಂದ್ರಕ್ಕೆ ಹೋಗಿ ಮೋದಿ ಎದುರುಗಡೆ ನಿಂತು ಜಿಲ್ಲೆಯ ಜನರ ಸಂಕಷ್ಟ ಪರಿಹರಿಸುವ ತಾಕತ್ತನ್ನು ಪ್ರದರ್ಶಿಸಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶರಾವತಿಯ ನಿರಾಶ್ರಿತರೂ ಸೇರಿದಂತೆ, ಚಕ್ರ, ವಾರಾಹಿ, ಸಾವೆ ಹಕ್ಲು, ಭದ್ರಾ, ತುಂಗಾ ಅಣೆಕಟ್ಟುಗಳ ಸಂತ್ರಸ್ಥರ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬೇಕು. ಜೊತೆಗೆ ಎಲ್ಲ ಬಗರ್ ಹುಕುಂ ಅರ್ಜಿಗಳಾದ 50, 53 ಮತ್ತು 57 ಅನ್ನು ಜನಪರವಾಗಿ ಇತ್ಯರ್ಥ ಮಾಡಿ ರೈತರಿಗೆ ಭೂ ಮಂಜೂರಾತಿ ಮಾಡಿಕೊಡಬೇಕು. ನಮ್ಮ ಸರಕಾರ ಜಾರಿಗೆ ತಂದಿರುವ 94ಸಿ, ಸಿಸಿ, ಡಿ, ಕಂದಾಯ ಗ್ರಾಮ ಮುಂತಾದವುಗಳಡಿ ಜಮೀನುಗಳನ್ನು ಮಂಜೂರು ಮಾಡಿ ವಸತಿ ಹಕ್ಕುಗಳನ್ನು ಸ್ಥಾಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

Similar News