ರಾಜ್ಯದಲ್ಲಿ 42,000 ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-12-28 17:21 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.28: ರಾಜ್ಯದಲ್ಲಿ 11,133 ಮಂದಿ ಪೌರಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಲಾಗಿದೆ. ರಾಜ್ಯದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬುಧವಾರ ಸುವರ್ಣವಿಧಾನಸೌಧದಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಬಜೆಟ್‍ನಲ್ಲಿ ಪೌರಕಾರ್ಮಿಕರಿಗೆ 2ಸಾವಿರ ರೂ. ಸಂಕಷ್ಟ ಭತ್ಯೆ ನೀಡಲಾಗಿದೆ. ಅವರ ಹಿತರಕ್ಷಣೆಗಾಗಿ ಕಾನೂನನ್ನು ಬದಲಾಯಿಸಿ, ಈ ತೀರ್ಮಾನವನ್ನು ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಲಾಗಿದೆ ಎಂದರು.

ಪೌರ ನೌಕರರು: ಇಂತಹ ವಿಷಯದಲ್ಲಿಯೂ ರಾಜಕಾರಣ ಮಾಡಲಾಗುತ್ತದೆ. ನ್ಯಾಯ ಕೊಡುತ್ತಿರುವವರ ಮೇಲೆ ನಂಬಿಕೆಯಿಟ್ಟು ನಡೆದರೆ ಒಳ್ಳೆಯದಾಗುತ್ತದೆ.ಇನ್ನು ಮುಂದೆ ಪೌರ ಕಾರ್ಮಿಕರು ಎನ್ನದೆ, ಸರಕಾರಿ ಪೌರ ನೌಕರರು ಎಂದು ಕರೆಯಲು ತೀರ್ಮಾನಿಸಲಾಗಿದೆ. ಈ ಹೆಸರು ನಿಮಗೆ ಸ್ವಾಭಿಮಾನ, ಅಸ್ಮಿತೆಯನ್ನು ನೀಡುತ್ತದೆ ಎಂದು ನುಡಿದರು.

ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಪೌರನೌಕಕರ ಮಕ್ಕಳ ಶಿಕ್ಷಣಕ್ಕೆ ತಡೆಯುಂಟಾಗಬಾರದು. ಅವರ ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಬಂದರೂ ಸರಕಾರ ಪರಿಹಾರ ಒದಗಿಸುತ್ತದೆ. ಅವರೂ ವಿದ್ಯಾವಂತರಾಗಿ ಎಲ್ಲರಂತೆಯೇ ಉನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಅವರು ಅಪೇಕ್ಷೆ ವ್ಯಕ್ತಪಡಿಸಿದರು.

ನೋವನ್ನು ನಾನು ಬಲ್ಲೆ: ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಇದರ ಬಗ್ಗೆ ಹಲವು ವರದಿಗಳು ಬಂದಿದ್ದರೂ, ಬೇಡಿಕೆ ಈಡೇರಿರಲಿಲ್ಲ. ನಗರ ಸ್ವಚ್ಛತೆ ಮಾಡುವುದರ ಕಷ್ಟವನ್ನು ನಾನು ಅರಿತಿದ್ದೇನೆ. ಯಾವ ವ್ಯಕ್ತಿ ಇನ್ನೊಬ್ಬರ ಸ್ವಚ್ಛತೆಯನ್ನೇ ನಿರ್ವಹಿಸುವ ಕೆಲಸವನ್ನು ಸತತವಾಗಿ ಮಾಡಿದಾಗ ಮಾನಸಿಕವಾಗಿ ಅನುಭವಿಸುವ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಅವರು ತಿಳಿಸಿದರು.

Similar News