×
Ad

ಕೊಪ್ಪಳ | ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಗೆ ದೇವದಾಸಿ ಪಟ್ಟ: ಮೂವರು ಆರೋಪಿಗಳ ಬಂಧನ

Update: 2022-12-29 11:32 IST

ಕೊಪ್ಪಳ, ಡಿ.29: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳಿಗೆ ಚಿಕಿತ್ಸೆ ಕೊಡಿಸದೇ ಕುಟುಂಬದವರೇ ದೇವದಾಸಿ ಪಟ್ಟ ಕಟ್ಟಿದ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಈ ಅಮಾನವೀಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಮುನಿರಾಬಾದ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. 

'ಯುವತಿಯ ಪೋಷಕರಾದ ಯಮನೂರಪ್ಪ, ಹುಲಿಗೆವ್ವ  ಮತ್ತು ಆಕೆಯ ಸಹೋದರಿ ಮೂಕವ್ವ ಬಂಧಿತರು. ಮೂಕವ್ವ ಪತಿ ಹನುಮಪ್ಪನ ಪತ್ತೆಗೆ ಶೋಧ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ' ಎಂದು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ:  ದೇವದಾಸಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯ

ಘಟನೆ ವಿವರ: ಕೊಪ್ಪಳ ತಾಲೂಕಿನ ಗ್ರಾಮವೊಂದರ 21 ವರ್ಷದ ಯುವತಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಇದಕ್ಕೆ ದೇವರ ಶಾಪವೇ ಕಾರಣ ಎಂದು ಕುಟುಂಬಸ್ಥರು ತಿಳಿಸಿದ್ದರೆನ್ನಲಾಗಿದೆ. ಈ ಸಂಬಂಧ ದೇವದಾಸಿಯನ್ನಾಗಿ ಮಾಡಿದರೆ ಗುಣಮುಖ ಆಗುವರು ಎಂಬ ಮೂಢನಂಬಿಕೆಯಿಂದ ಹೆತ್ತವರೇ ಹುಲಿಗಿಯಲ್ಲಿ ಕಳೆದ ಮೇ ತಿಂಗಳಲ್ಲಿ ಯುವತಿಯನ್ನು ದೇವದಾಸಿಯಂಥ ಅನಿಷ್ಠ ಪದ್ಧತಿಗೆ ನೂಕಿದ್ದರು ಎಂದು ಹೇಳಲಾಗಿದೆ.

ಯುವತಿಯ ನಡುವಳಿಕೆ, ವಿಚಿತ್ರ ವರ್ತನೆ ಕಂಡು ಗ್ರಾಮದ ದಲಿತ ಮುಖಂಡರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಬಳಿಕ ಖಚಿತ ಮಾಹಿತಿ‌ ಮೇರೆಗೆ ಗ್ರಾಮಕ್ಕೆ ಭೇಟಿ‌ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಯುವತಿಯನ್ನು 7 ತಿಂಗಳ ಹಿಂದೆಯೇ ದೇವದಾಸಿಯನ್ನಾಗಿ ಮಾಡಿರುವ ವಿಷಯ ತಿಳಿದುಬಂದಿದೆ.

Similar News