ಹೇಳುವುದೇ ಬೇರೆ, ಮಾಡುವುದೇ ಬೇರೆ: ಪ್ರಜ್ಞಾ ಸಿಂಗ್ ಠಾಕೂರ್, ಸಿಟಿ ರವಿ ವಿಡಿಯೋ ಹಂಚಿದ ಕಾಂಗ್ರೆಸ್

''BJP ನಾಯಕರಿಂದ ವಿಭಿನ್ನ ಹೇಳಿಕೆ''

Update: 2022-12-29 07:59 GMT

ಬೆಂಗಳೂರು, ಡಿ.29: ಭಯೋತ್ಪಾದನೆ, ಹಿಂಸೆ ಕುರಿತು ಬಿಜೆಪಿ ನಾಯಕರು ಹೇಳುವುದೇ ಬೇರೆ, ಮಾಡುವುದೇ ಬೇರೆ ಎಂದು ಕಾಂಗ್ರೆಸ್ (@INCKarnataka) ಹೇಳಿದೆ. 

ಈ ಸಂಬಂಧ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್,  ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಚಿಕ್ಕಮಗಳೂರು ಶಾಸ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ವಿಭಿನ್ನ ಹೇಳಿಕೆಯ ವಿಡಿಯೋ ಒಂದನ್ನು ಹಂಚಿಕೊಂಡಿದೆ.  

1:22 ನಿಮಿಷದಷ್ಟಿರುವ ವಿಡಿಯೋದಲ್ಲಿ ಇತ್ತೀಚೆಗೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚಾಕು, ಶಸ್ತ್ರಾಸ್ತ್ರ ಹಿಡಿಯಿರಿ ಎಂದು ಬಹಿರಂಗವಾಗಿ ಕರೆ ಕೊಡುವ ಹೇಳಿಕೆ ಮತ್ತು ಶಾಸಕ ಸಿಟಿ ರವಿ ಅವರು ಬೆಳಗಾವಿ ಅಧಿವೇಶನದಲ್ಲಿ ಜಾಗತಿಕ ಭಯೋತ್ಪಾದನೆ, ಹಿಂಸೆ, ಅಸಹಿಷ್ಣುತೆ‌ಯ ವಿರುದ್ಧ ಮಾತನಾಡಿರುವುದು ದಾಖಲಾಗಿದೆ.  

ಪ್ರಜ್ಞಾ ಸಿಂಗ್ ಠಾಕೂರ್  ಹೇಳಿದ್ದೇನು?:  ನಿಮ್ಮ ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ, ಏನಿಲ್ಲವೆಂದರೂ ತರಕಾರಿಗಳನ್ನು ಕತ್ತರಿಸಲು ಬಳಸುತ್ತಿದ್ದ ಕನಿಷ್ಠ ಚಾಕುಗಳನ್ನಾದರೂ ಇಟ್ಟುಕೊಳ್ಳಿ. ಯಾವಾಗ ಯಾವ ಪರಿಸ್ಥಿತಿ ಬರುತ್ತದೋ ಗೊತ್ತಿಲ್ಲ. ಎಲ್ಲರಿಗೂ ಆತ್ಮರಕ್ಷಣೆ ಹಕ್ಕಿದೆ. ನಮ್ಮ ಮನೆಗೆ ಯಾರಾದರೂ ನುಸುಳಿದರೆ ಮತ್ತು ನಮ್ಮ ಮೇಲೆ ದಾಳಿ ಮಾಡಿದರೆ ಆಗ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅದು ನಮಗೆ ಸಹಾಯ ಮಾಡುತ್ತದೆ. ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಸಿಟಿ ರವಿ ಹೇಳಿದ್ದೇನು?  ಟೆರರ್ ಅಂದರೆ ಭಯ ಹುಟ್ಟಿಸುವುದು ಎಂದು ಅರ್ಥ. ಪ್ರಜಾ ಪ್ರಭುತ್ವ ಮತ್ತು ಹಿಂಸೆ ಒಟ್ಟಿಗೆ ಹೋಗಲು ಸಾಧ್ಯ ಇಲ್ಲ.  ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡಬೇಕು. ಪ್ರತಿಯೊಬ್ಬ ನಾಯಕರು ಭಯೋತ್ಪಾದಕರನ್ನು ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದರೆ ಮಾತ್ರ ಭಯೋತ್ಪಾದನೆ ಹರಡುವಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಸದನದಲ್ಲಿ ಹೇಳಿದ್ದರು. 

Similar News